ಅನಧಿಕೃತ ಕಟ್ಟಡಗಳ ನಿರ್ಮಾಣ ನಿಯಂತ್ರಣಕ್ಕೆ ವಿಧೇಯಕ ಮಂಡನೆ

Update: 2020-02-18 16:52 GMT

ಬೆಂಗಳೂರು, ಫೆ.18: ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ-2020, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ-2020 ಸೇರಿದಂತೆ ಆರು ವಿಧೇಯಕಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸಲು ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ-2020 ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು.

ಅನುಮತಿ ಇಲ್ಲದೆ ಅಥವಾ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮೇಲಿನ ಸ್ವತ್ತು ತೆರಿಗೆ ಮತ್ತು ಸ್ವತ್ತು ತೆರಿಗೆಗೆ ಸಮಾನವಾದ ದಂಡವನ್ನು ಸಂಗ್ರಹಿಸುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸಲು ಈ ವಿಧೇಯಕ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಅಲ್ಲದೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಾಕಲಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಒಳಗೊಂಡಂತೆ ಕೇಬಲ್ಲಿನ ಮೇಲೆ ಶುಲ್ಕಗಳನ್ನು ಮತ್ತು ವಾರ್ಷಿಕ ಟ್ರಾಕ್ ಬಾಡಿಗೆಯನ್ನು ವಿಧಿಸಲು ಈ ತಿದ್ದುಪಡಿ ವಿಧೇಯಕ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ವಿಧೇಯಕ: ಸರಕುಗಳು ಮತ್ತು ಸೇವೆಗಳ ಸಂಗ್ರಹಣಾ ವೌಲ್ಯಕ್ಕಾಗಿನ ಮಿತಿಯನ್ನು ಒಂದು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ನ್ನು(2000ರ ಕರ್ನಾಟಕ ಅಧಿನಿಯಮ 29) ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಮಂಡಿಸಿದ ವಿಧೇಯಕದ ಉದ್ದೇಶವನ್ನು ವಿವರಿಸಲಾಗಿದೆ.

ರಾಜಭಾಷಾ(ತಿದ್ದುಪಡಿ)ವಿಧೇಯಕ: ಕರ್ನಾಟಕ ರಾಜಭಾಷಾ ಅಧಿನಿಯಮ-1963ರ(1963ರ ಕರ್ನಾಟಕ ಅಧಿನಿಯಮ26) 5ಎ ಪ್ರಕರಣವು ಪ್ರತಿಯೊಂದು ಆದೇಶ, ನಿಯಮಗಳು, ವಿನಿಮಯಗಳು ಅಥವಾ ಉಪವಿಧಿಗಳ ಕನ್ನಡ ಭಾಷಾಂತರದ ಪ್ರಕಟಣೆಗೆ ಮುನ್ನ ರಾಜ್ಯಪಾಲರ ಅನುಮೋದನೆ ಅಗತ್ಯವಿದೆ. ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.

ಆದುದರಿಂದ, ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರತಿಯೊಂದು ಆದೇಶ, ನಿಯಮಗಳು, ವಿನಿಮಯಗಳು ಅಥವಾ ಉಪವಿಧಿಗಳ ಕನ್ನಡ ಭಾಷಾಂತರವನ್ನು ದೃಢೀಕರಿಸಲು ರಾಜ್ಯಪಾಲರ ಬದಲಿಗೆ ರಾಜ್ಯ ಸರಕಾರಕ್ಕೆ ಅಧಿಕಾರವನ್ನು ನೀಡುವುದಕ್ಕೆ ಈ ಪ್ರಕರಣವನ್ನು ತಿದ್ದುಪಡಿ ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News