ಮರಗಳ ಗಣತಿ ಆರಂಭಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ: ಹೈಕೋರ್ಟ್ ಎಚ್ಚರಿಕೆ

Update: 2020-02-18 17:25 GMT

ಬೆಂಗಳೂರು, ಫೆ.18: ಬಿಬಿಎಂಪಿ ವ್ಯಾಪ್ತಿಯಲ್ಲಿ ಆದೇಶದ ಗಡುವು ಮುಗಿದಿದ್ದರೂ ಮರಗಳ ಗಣತಿ ಕಾರ್ಯ ಆರಂಭಿಸದ ಬಿಬಿಎಂಪಿ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿದೆ.

ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಮರ ಸಂರಕ್ಷಣಾ ಕಾಯ್ದೆ ಜಾರಿಯಾಗಿ 44 ವರ್ಷಗಳು ಕಳೆದಿವೆ. ಮರ ಗಣತಿ ಮಾಡುವಂತೆ 2019ರ ಆ.28ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈವರೆಗೂ ಒಂದೇ ಒಂದು ಮರ ಗಣತಿ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದ ನ್ಯಾಯಪೀಠವು ಒಂದು ವಾರದಲ್ಲಿ ಪ್ರಾಧಿಕಾರದಲ್ಲಿರುವ ಸದಸ್ಯರ ಹೆಸರನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಗಡುವು ನೀಡಿತು. ನಂತರ ಸದಸ್ಯರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಪ್ರಕರಣದ ವಿಚಾರಣೆಯನ್ನು ಮಾ.4ಕ್ಕೆ ಮುಂದೂಡಿತು.

ಈ ಮಧ್ಯೆ ಬಿಎಂಆರ್‌ಸಿಎಲ್ ಪರ ವಾದಿಸಿದ ವಕೀಲರು, ಮೆಟ್ರೋ ರೈಲು ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಮರಗಳನ್ನು ಕತ್ತರಿಸಲು ತಜ್ಞರ ವಿಶೇಷ ಸಮಿತಿ ಶಿಫಾರಸು ಮಾಡಿದೆ. ಆದರೆ, ಮರಗಳನ್ನು ಕತ್ತರಿಸಬಾರದು ಎಂದು 2020ರ ಜನವರಿಯಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈಗಾಗಲೇ ಕಾಮಗಾರಿ ವೆಚ್ಚ 52 ಕೋಟಿ ರೂಪಾಯಿ ಹೆಚ್ಚಾಗಿದೆ. ಹೀಗಾಗಿ, ಮರ ಕತ್ತರಿಸದಂತೆ ಮೆಟ್ರೋ ನಿಗಮಕ್ಕೆ ಸೂಚಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ಮನವಿ ಪರಿಗಣಿಸಿದ ನ್ಯಾಯಾಲಯವು, ವಿಶೇಷ ಸಮಿತಿ ಶಿಫಾರಸಿನ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಧ್ಯಂತರ ಆದೇಶ ತಿದ್ದುಪಡಿಗೆ ಕೋರಿ ಸೂಕ್ತ ಅರ್ಜಿ ಸಲ್ಲಿಸಿ ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News