ಫ್ಲೋರಿಂಗ್‌ಗೆ ಹಣ ಬಿಡುಗಡೆಗೆ ಮಾತುಕತೆ ನಡೆಸುವೆ: ಶಾಸಕ ರಿಝ್ವಾನ್ ಅರ್ಶದ್

Update: 2020-02-18 17:52 GMT

ಬೆಂಗಳೂರು, ಫೆ. 18: ಸರಕಾರಿ ಕಲಾ ಕಾಲೇಜಿನ ಕಟ್ಟಡದ ಪ್ಲೋರಿಂಗ್‌ಗೆ ಹಣ ಬಿಡುಗಡೆ ಮಾಡಲು ಮಂತ್ರಿಗಳೊಡನೆ ಸಮಾಲೋಚನೆ ನಡೆಸುತ್ತೇನೆ ಎಂದು ಶಾಸಕ ರಿಝ್ವಾನ್ ಅರ್ಶದ್ ಭರವಸೆ ನೀಡಿದ್ದಾರೆ.

ಮಂಗಳವಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಚಿತ ಲ್ಯಾಪ್‌ಟಾಪ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಕಾಲೇಜುಗಳಲ್ಲಿ ಬೌದ್ಧಿಕ ಮಟ್ಟ ಅಪಾರವಾಗಿರುತ್ತದೆ ಎಂದರು.

ಸರಕಾರಿ ಕಾಲೇಜುಗಳಲ್ಲಿನ ಕಲಿಕೆಯ ವಾತಾವರಣ ಖಾಸಗಿ ಕಾಲೇಜುಗಳಲ್ಲಿ ದೊರೆಯುವುದಿಲ್ಲ. ಇರುವ ಸೌಲಭ್ಯಗಳಲ್ಲೇ ಶ್ರಮವಹಿಸಿ ಅಧ್ಯಯನ ನಡೆಸಿದಾಗ ಜೀವನದಲ್ಲಿ ಎತ್ತರಕ್ಕೆ ಬೆಳೆಯಬಹುದು. ವಿದ್ಯಾರ್ಥಿಗಳು ತಮ್ಮ ಮುಂದಿನ ಗುರಿಯನ್ನು ಈಗಿನಿಂದಲೇ ಸಿದ್ಧಗೊಳಿಸಿಕೊಂಡು ಮುನ್ನಡೆಯಬೇಕು. ಆಗ ಮಹತ್ತರವಾದುದನ್ನು ಸಾಧಿಸಬಹುದು ಎಂದು ಹೇಳಿದರು.

ಯಾರೂ ಸಾಮಾನ್ಯರಲ್ಲ. ಎಲ್ಲರೂ ತಮಗಿರುವ ಸಾಮರ್ಥ್ಯ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧ್ಯೇಯ ಮತ್ತು ಜ್ಞಾನವನ್ನು ಸಮಾಜ ಗೌರವಿಸುತ್ತದೆ. ಹೆಚ್ಚು ಜ್ಞಾನ ಸಂಪಾದನೆ ಯಶಸ್ಸಿಗೆ ಪೂರಕವಾಗುತ್ತದೆ. ಇಂದಿನ ಯುವಜನತೆ ನಾಳಿನ ಭವಿಷ್ಯವಾಗಿದ್ದಾರೆ. ಅದನ್ನು ಅರಿತು ವಿದ್ಯಾರ್ಥಿಗಳು ತಮಗೆ ದೊರೆಯುವ ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವವೇ ಇಂದು ಜಾಗತಿಕ ಹಳ್ಳಿಯಾಗಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಎಲ್ಲ ವಿಷಯಗಳು ಕೈಗೆಟುಕುತ್ತವೆ. ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೆ ಇರುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಮುಂದೆ ದೊಡ್ಡ ಪ್ರಪಂಚವೇ ಕಾದಿದೆ ಎಂದು ಹೇಳಿದರು.

ಇದೇ ವೇಳೆ ಶಿಕ್ಷಣ ಇಲಾಖೆ ವತಿಯಿಂದ ಕಲಾ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ 302 ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರೊ.ಪ್ರಸಾದ್, ಸರಕಾರಿ ವಿಜ್ಞಾನ ಕಾಲೇಜಿ ಪ್ರಾಂಶುಪಾಲ ಲೋಕಪ್ಪಗೌಡ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News