ಐಪಿಎಲ್‌ಮೊದಲ ಪಂದ್ಯದಲ್ಲಿ ಚೆನ್ನೈಗೆ ಮುಂಬೈ ಎದುರಾಳಿ

Update: 2020-02-19 05:02 GMT

ಹೊಸದಿಲ್ಲಿ, ಫೆ.18: ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾರ್ಚ್ 29 ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ನಾಯಕ, 38ರ ಹರೆಯದ ಧೋನಿ ಕಳೆದ ವರ್ಷ 50 ಓವರ್‌ಗಳ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಕಾಣಿಸಿಕೊಂಡ ಬಳಿಕ ಯಾವುದೇ ಕ್ರಿಕೆಟ್ ಕ್ಲಬ್ ಅಥವಾ ದೇಶದ ಪರ ಆಡಿಲ್ಲ. ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆಂಬ ವದಂತಿಯೂ ಹಬ್ಬಿತ್ತು.

   ಆಸ್ಟ್ರೇಲಿಯದಲ್ಲಿ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನತ್ತ ಧೋನಿ ಚಿತ್ತವಿರಿಸಿದ್ದಾರೆ. ವಿಶ್ವಕಪ್‌ಗೆ ಧೋನಿ ಆಯ್ಕೆಯಾಗಬೇಕಾದರೆ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಧೋನಿಯ ಪ್ರದರ್ಶನ ಅತ್ಯಂತ ಮುಖ್ಯವಾಗಿದೆ ಎಂದು ಕ್ರಿಕೆಟಿಗರು ಹಾಗೂ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಿಸಿಸಿಐ ಮಂಗಳವಾರ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಮೇ 24ರಂದು ನಡೆಯಲಿರುವ ಫೈನಲ್ ಪಂದ್ಯದ ಸ್ಥಳವನ್ನು ಇನ್ನೂ ಬಹಿರಂಗಪಡಿಸಿಲ್ಲ. 2008ರಲ್ಲಿ ಆರಂಭವಾಗಿರುವ ಐಪಿಎಲ್ ಟೂರ್ನಿಯು ಈ ವರ್ಷ 57 ದಿನಗಳ ಕಾಲ ನಡೆಯಲಿದೆ. ಇದು ಕಳೆದ ಆವೃತ್ತಿಗಿಂತ ಆರು ದಿನಗಳು ಜಾಸ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News