ಮಂಗಳೂರಿನಲ್ಲಿ ಮೀನಿಗೆ ಮತ್ತೆ ಬರ!

Update: 2020-02-19 08:27 GMT

►ದಡ ಸೇರುತ್ತಿರುವ ಶೇ.80ರಷ್ಟು ಬೋಟುಗಳು  

►ಗುಳೆ ಹೊರಟ ಹೊರ ರಾಜ್ಯದ ಕಾರ್ಮಿಕರು

ಸಾಮಾನ್ಯವಾಗಿ ಟ್ರಾಲ್‌ಬೋಟ್ ಮತ್ತು ಪರ್ಸಿನ್ ಬೋಟ್‌ಗಳು ಮೀನುಗಾರಿಕೆಗೆ ತೆರಳಿದರೆ ಮರಳಿ ಬರುವಾಗ 2 ಅಥವಾ 1 ವಾರವಾಗುತ್ತದೆ. ಪ್ರತೀ ಬೋಟ್‌ನಲ್ಲಿ ಕನಿಷ್ಠ 10 ಮಂದಿ ಮೀನುಗಾರರಿರುತ್ತಾರೆ. ಒಮ್ಮೆ ಹೋಗಿ ಬರಲು ಇವರಿಗೆ ಆಹಾರ ಸಾಮಗ್ರಿ, ಅಡುಗೆ ಅನಿಲ, ಸಂಬಳ, ಡೀಸೆಲ್, ಮಂಜುಗಡ್ಡೆ ಎಂದೆಲ್ಲಾ ಕನಿಷ್ಠ 4 ಲಕ್ಷ ರೂ. ಬೇಕಾಗುತ್ತದೆ. ಹಾಗಾಗಿ 7-8 ಲಕ್ಷ ರೂ. ವೌಲ್ಯದ ಮೀನುಗಳು ಸಂಗ್ರಹವಾದರೆ ಮಾತ್ರ ಮತ್ಸೋದ್ಯಮಿಗೆ ಆರ್ಥಿಕ ಲಾಭ ಸಿಗಲಿದೆ. ಆದರೆ ಮೀನಿನ ಲಭ್ಯತೆ ಕಡಿಮೆಯಿದ್ದ ಕಾರಣ ಕನಿಷ್ಠ 3.5 ಲಕ್ಷ ರೂ. ಮಾತ್ರ ಸಿಗುತ್ತದೆ. ಇದರಿಂದ ಮೀನು ವ್ಯಾಪಾರಿಗಳು ಆರ್ಥಿಕವಾಗಿ ನಷ್ಟ ಹೊಂದುತ್ತಲೇ ಬೋಟುಗಳನ್ನು ಕಲಿಗೆ ಇಳಿಸಲು ಹಿಂದೇಟು ಹಾಕುತ್ತಾರೆ.

ಮಂಗಳೂರು, ಫೆ.18: ಕರಾವಳಿ ಕರ್ನಾಟಕದ ಹೆಬ್ಬಾಗಿಲು ಎಂದೇ ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಮೀನಿನ ಉತ್ಪನ್ನ ತೀರಾ ಕಡಿಮೆಯಾಗಿದೆ. ಅಷ್ಟೇ ಅಲ್ಲ ವಾರದಿಂದೀಚೆಗೆ ಮೀನಿಗೆ ಭಾಗಶಃ ‘ಬರ’ ಬಂದಿದೆ. ಲಭ್ಯ ಮೀನಿನ ದರ ಕೂಡ ಅಧಿಕವಾಗಿರುವುದರಿಂದ ಮಲೆನಾಡು ಮತ್ತು ಬಯಲು ಸೀಮೆಯ ಮೀನು ಪ್ರಿಯರು ಮಾತ್ರವಲ್ಲ ಸ್ವತಃ ಕರಾವಳಿಗರೇ ತಾಜಾ ಮೀನಿಗಾಗಿ ಬಕಪಕ್ಷಿಯಂತೆ ಕಾದು ಕುಳಿತುಕೊಳ್ಳುವಂತಾಗಿದೆ. ಎಂದಿನಂತೆ ಮೀನುಗಾರಿಕೆಗೆ ಹೊರಟ ಮೀನುಗಾರರು ನಿರೀಕ್ಷೆ ಯಷ್ಟು ಮೀನುಗಳು ಸಿಗದ ಕಾರಣ ಬರಿಗೈಯಲ್ಲಿ ಮರಳುತ್ತಿದ್ದಾರೆ. ಅದರಂತೆ ಶೇ.80ರಷ್ಟು ಬೋಟುಗಳು ದಡ ಸೇರಿ ‘ಲಂಗರು’ ಹಾಕಲ್ಪಟ್ಟಿವೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಮಾತ್ರವಲ್ಲ, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಮಾಲಕರು, ಕಾರ್ಮಿಕರು ಮತ್ತವರ ಕುಟುಂಬ ನಿರ್ವಹಣೆಯ ಮೇಲೆ ಭಾರೀ ಪರಿಣಾಮ ಬೀರಿದೆ. ವರ್ಷದಿಂದ ವರ್ಷಕ್ಕೆ ಸೊರಗುತ್ತಿ ರುವ ಮತ್ಸೋದ್ಯಮದಿಂದ ಯಥಾ ವತ್ತಾಗಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಹಿಂದೆ ಒಂದೆರಡು ವಾರ ಮೀನು ಗಾರಿಕೆ ಇಳಿಮುಖ ವಾದರೂ ಕೂಡ ಉಳಿದ ಅವಧಿಯಲ್ಲಿ ವೃದ್ಧಿಯಾಗುತ್ತಿದ್ದ ಕಾರಣ ಈ ಉದ್ಯಮದಿಂದ ಹೆಚ್ಚು ಲಾಭ ಸಿಗದಿದ್ದರೂ ಕೂಡ ನಷ್ಟವಾಗುತ್ತಿರಲಿಲ್ಲ. ಆದರೆ ಈ ಬಾರಿ ನಷ್ಟದ ಮೇಲೆ ನಷ್ಟವಾಗು ತ್ತಿರುವ ಕಾರಣ ಉದ್ಯಮ ಮುಂದು ವರಿಸಲಾಗದೆ ಮೀನು ವ್ಯಾಪಾರಿಗಳು ಹತಾಶರಾಗಿದ್ದಾರೆ. ಕೆಲವರು ಸಾಲ ಸೋಲ ಮಾಡಿ ವ್ಯವಹಾರ ಮುಂದುವರಿಸಲು ಮುಂದಾದರೆ, ಇನ್ನು ಕೆಲವರು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಋತುವಿನಲ್ಲಿ ಮೀನು ಉತ್ಪಾದನೆಯು ಭಾರೀ ಕಡಿಮೆಯಾಗಿದೆ. ಮುಂಗಾರು ಮಳೆಯು ಶುರುವಾಗುತ್ತಿದ್ದಂತೆ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಎರಡು ತಿಂಗಳ ನಿಷೇಧ ಹೇರುವುದು ಸಾಮಾನ್ಯವಾಗಿದೆ. ಆಗಸ್ಟ್‌ನಲ್ಲಿ ಮೀನುಗಾರಿಕೆ ಪ್ರಾರಂಭ ಗೊಂಡಿ ದ್ದರೂ ಕೂಡಾ ಇಳುವರಿ ನಿರೀಕ್ಷೆಯಷ್ಟಿಲ್ಲ. ಈ ಋತುವಿನ ಮೀನು ಗಾರಿಕೆಗೆ ಇನ್ನೂ ಮೂರು ತಿಂಗಳ ಕಾಲಾವಧಿ ಇದ್ದರೂ ಮೀನು ಉತ್ಪಾದನೆಯಲ್ಲಿ ಹೆಚ್ಚಳಗೊಳ್ಳುವ ಸಾಧ್ಯತೆ ಕಡಿಮೆ ಎಂದು ಮೀನುಗಾರರು ಅಭಿಪ್ರಾಯಪಡುತ್ತಾರೆ.

ಮೀನಿಗೆ ಇಂಥದ್ದೊಂದು ‘ಬರ’ ಬಾರದೆ ಅದೆಷ್ಟೋ ವರ್ಷವಾಗಿದೆ. ಈ ಋತುವಿನಲ್ಲಿ ಮೀನೇ ಇಲ್ಲ. ಲಭ್ಯ ಮೀನಿಗೆ ದುಬಾರಿ ದರ ವಿರುವ ಕಾರಣ ಮೀನುಪ್ರಿಯರು ಅದನ್ನು ಖರೀದಿಸಲಾಗದೆ ಕೈ ಹಿಚುಕಿಕೊಳ್ಳುವಂತಾಗಿದೆ. ಸರಿ ಯಾಗಿ ಕೆಲಸವಿಲ್ಲದ ಕಾರಣ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರು ಗುಳೇ ಹೊರಟಿದ್ದಾರೆ. ಇನ್ನು ಕೆಲವು ಮಾಲಕರು ಕಾರ್ಮಿಕರ ಗುಳೆ ತಪ್ಪಿಸಲು ಬೋಟಿನ ದುರಸ್ತಿ, ಪೈಂಟಿಂಗ್ ಇತ್ಯಾದಿ ಕೆಲಸ ಮಾಡಿಸುತ್ತಿದ್ದಾರೆ. ಬಂದರು ದಕ್ಕೆಯಲ್ಲಿ ಬೆಳಗ್ಗೆ 8 ಗಂಟೆಗೆ ಶುರುವಾಗುವ ಬಿಸಿಲ ಧಗೆಯು ಸಂಜೆಯವರೆಗೂ ಇರುತ್ತದೆ. ಈ ಸುಡು ಬಿಸಿಲನ್ನೂ ಲೆಕ್ಕಿಸದೆ ಅದೆಷ್ಟೋ ಕಾರ್ಮಿಕರು ಏನಾದರೊಂದು ಕೆಲಸ ಮಾಡಿ ಕೂಲಿ ಸಂಪಾದಿಸುತ್ತಿದ್ದರು. ಆದರೆ, ಈ ಬಾರಿ ಅಂತಹ ಸಣ್ಣಪುಟ್ಟ ಕೆಲಸವೂ ಇಲ್ಲದೆ, ಊರಿಗೂ ಹೋಗಲಾಗದೆ ಅರ್ಧಹೊಟ್ಟೆಯಲ್ಲಿ ಕಾಲಹರಣ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಮೀನು ಕಾರ್ಮಿಕರೊಬ್ಬರು ಹೇಳಿದ್ದಾರೆ.

ಮೀನು ಉತ್ಪಾದನೆಗೆ ಸಂಬಂಧಿಸಿ ಕಳೆದ ವರ್ಷದ ವ್ಯವಹಾರ ಅವಲೋಕಿಸುವಾಗ ಈ ಋತುವಿನಲ್ಲಿ ಆ ಪ್ರಮಾಣ ತಲುಪುವುದು ಅನುಮಾನ ಎಂದು ಕಳೆದ 20 ವರ್ಷದಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ವ್ಯಾಪಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಬಂದರು ದಕ್ಕೆಯಿಂದ ಹೊರಟ ಬೋಟುಗಳು ಕೇರಳ, ಗೋವಾ, ಮಹಾರಾಷ್ಟ್ರದತ್ತ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಒಂದು ಬೋಟು ಕನಿಷ್ಠ 7 ಅಥವಾ 8 ಲಕ್ಷ ರೂ. ಬೆಲೆಯ ಮೀನುಗಳನ್ನು ಹೊತ್ತು ತರುತ್ತದೆ. ಆದರೆ ಈ ಬಾರಿ ಹವಾಮಾನ ವೈಪರಿತ್ಯವು ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬಿದ್ದ ಕಾರಣ ಒಟ್ಟು ವ್ಯವಹಾರಕ್ಕೆ ಭಾರೀ ಹೊಡೆದ ನೀಡಿದೆ. ಕಳೆದ ಮಳೆಗಾಲದಲ್ಲಿ ಕರಾವಳಿ ತೀರದಲ್ಲಿ ಬೆನ್ನು ಬೆನ್ನಿಗೆ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಸಮುದ್ರ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭ ನೂರಾರು ಬೋಟುಗಳು ಬಂದರ್‌ನಲ್ಲಿ ಲಂಗರು ಹಾಕಿತ್ತು. ಈ ಮಧ್ಯೆ ಕೆಲವು ತಿಂಗಳ ಹಿಂದೆ ಮೀನುಗಾರಿಕಾ ಲಾರಿಗಳ ಮುಷ್ಕರವೂ ಮತ್ಸೋದ್ಯಮದ ಮೇಲೆ ಪರಿಣಾಮ ಬೀರಿತ್ತು.

ಬಂದರ್ ದಕ್ಕೆಯಲ್ಲಿ ಟ್ರಾಲ್, ಪಸಿಧನ್, ಗಿಲ್‌ನೆಟ್, ನಾಡದೋಣಿ ಎಂದೆಲ್ಲಾ ಸುಮಾರು 3 ಸಾವಿರ ಬೋಟು-ದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಮೀನುಗಳ ಲೋಡ್-ಅನ್‌ಲೋಡ್, ಐಸ್ ಮಾರಾಟ-ಸಾಗಾಟ, ಹರಾಜು ಕೂಗುವುದು, ಮೀನು ಹೊರುವುದು, ಸಾಗಿಸುವುದು, ಕತ್ತರಿ ಶುಚಿ ಮಾಡಿಕೊಡುವುದು ಹೀಗೆ ಅಂದಾಜು 30 ಸಾವಿರಕ್ಕೂ ಅಧಿಕ ಕಾರ್ಮಿಕರು ನೇರವಾಗಿ ಕೆಲಸ ಮಾಡುತ್ತಾರೆ. ನೇರ ಮತ್ತು ಪರೋಕ್ಷ ಸಹಿತ ಪ್ರತೀ ದಿನ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೀನುಗಳು ನಿರೀಕ್ಷಿಸದಷ್ಟು ಸಿಗದೆ, ಬೋಟುಗಳು ಲಂಗರು ಹಾಕಿದ್ದಲ್ಲದೆ ಮೀನಿಗೆ ತೀವ್ರ ‘ಬರ’ ಬಂದ ಕಾರಣ ಮತ್ಸೋದ್ಯಮವೇ ಸಂಕಷ್ಟಕ್ಕೆ ಸಿಲುಕಿವೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಹವಾಮಾನ ವೈಪರೀತ್ಯದಿಂದ ಈ ಬಾರಿ ಮೀನು ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಮೀನುಗಾರಿಕೆ ಸಂದರ್ಭ ದೊರೆತ ಸಣ್ಣ ಮೀನುಗಳನ್ನು ಫಿಶ್‌ಮೀಲ್ ಪ್ಲಾಂಟ್/ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಸಣ್ಣ ಮೀನುಗಳನ್ನು ಹಿಡಿಯುವುದರಿಂದ ಮೀನಿನ ಸಂತತಿ ಕಡಿಮೆಯಾಗುತ್ತದೆ. ಜೊತೆಗೆ ಕಳೆದ ಬಾರಿಯ ಚಂಡಮಾರುತ ಕೂಡ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಮೀನಿನ ಉತ್ಪಾದನೆಯು ಸಹ ಕಡಿಮೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಮೀನಿನ ಕನಿಷ್ಟ ಕಾನೂನಾತ್ಮಕ ಗಾತ್ರವನ್ನು ಸರಕಾರ ನಿಗದಿಗೊಳಿಸಿದೆ.

ತಿಪ್ಪೇಸ್ವಾಮಿ ಡಿ.,

ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ದ.ಕ.ಜಿಲ್ಲೆ

ಮೀನಿಗೆ ‘ಬರ’ ಬಂದಿದೆ. ಬಂದರ್ ದಕ್ಕೆಯಲ್ಲಿ ಯಾವತ್ತೂ ಇಂತಹ ಪರಿಸ್ಥಿತಿ ಬಂದಿಲ್ಲ. ಸಾಲ ಮಾಡಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಮತ್ಸ ಉದ್ಯಮಿಗಳು ಭಾರೀ ನಷ್ಟದಿಂದ ಕಂಗಾಲಾಗಿದ್ದಾರೆ. ಶೇ.80ರಷ್ಟು ಬೋಟುಗಳು ದಡ ಸೇರಿವೆ. ಕಾರ್ಮಿಕರು ಕೆಲಸವಿಲ್ಲದೆ ಊರಿಗೆ ತೆರಳಿದ್ದಾರೆ. ಹಾಗೇ ಹೋದ ಕಾರ್ಮಿಕರನ್ನು ಮರಳಿ ಕರೆತರುವುದು ಕಷ್ಟ ಎಂದು ಭಾವಿಸಿ ಕೆಲವು ವ್ಯಾಪಾರಿಗಳು ಆ ಕೆಲಸಗಾರರಿಗೆ ದಕ್ಕೆಯಲ್ಲೇ ಸಣ್ಣಪುಟ್ಟ ಕೆಲಸ ಕೊಟ್ಟು ಊರಿಗೆ ಹೋಗದಂತೆ ತಡೆ ಹಿಡಿದಿದ್ದಾರೆ. ಮೀನಿನ ಇಳುವರಿ ಕಡಿಮೆಯಾದ ಕಾರಣ ಸಮಸ್ಯೆ ಬಿಗಡಾಯಿಸಿದೆ.

 ನಿತಿನ್ ಕುಮಾರ್

ಮಾಜಿ ಅಧ್ಯಕ್ಷರು, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ

ಸರಕಾರವು ಮೀನುಗಾರಿಕಾ ಋತು (ಆಗಸ್ಟ್ 1ರಿಂದ ಮೇ 31ರವರೆಗೆ)ವಿನಲ್ಲಿ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯು ಸಾಂಪ್ರದಾಯಿಕದ ಬದಲು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರ ನೇರ ಪರಿಣಾಮ ಇಡೀ ಮೀನುಗಾರಿಕೆಯ ಮೇಲಾಗುತ್ತಿವೆ. ಈ ಜನವರಿಯಿಂದಲೇ ಮೀನುಗಾರಿಕಾ ಚಟುವಟಿಕೆಯಲ್ಲಿ ಏರುಪೇರಾಗುತ್ತಿದೆ. ಅಂಜಲ್, ಮಾಂಜಿಯ ದರ ದುಪ್ಪಟ್ಟು ಆಗಿದೆ. ಈಗ ಸಣ್ಣ ಸಣ್ಣ ಬಂಗುಡೆ, ನಂಗ್, ಬೂತಾಯಿಯ ಇಳುವರಿ ಅಧಿಕವಿದ್ದು, ಅದರ ದರವೂ ವಿಪರೀತ ಏರಿಕೆಯಾಗಿದೆ. ಒಟ್ಟಿನಲ್ಲಿ ಈ ಬಾರಿ ಮೀನುಗಾರಿಕೆಗೆ ‘ಬರ’ ಬಂದಿದೆ ಎನ್ನದೆ ವಿಧಿಯಿಲ್ಲ.  ಅಲಿ

ಹಸನ್

ಅಧ್ಯಕ್ಷರು, ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News