ಮಂಗಳೂರು ಗೋಲಿಬಾರ್ ಪೊಲೀಸರ ಪೂರ್ವ ನಿಯೋಜಿತ ಕೃತ್ಯ: ಸಿದ್ದರಾಮಯ್ಯ ಆರೋಪ

Update: 2020-02-19 13:22 GMT

ಬೆಂಗಳೂರು, ಫೆ. 19: ‘ಮಂಗಳೂರು ಗೋಲಿಬಾರ್ ಪ್ರಕರಣವನ್ನು ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಇಬ್ಬರು ಅಮಾಯಕರ ಬಲಿ ಪಡೆದು ತಪ್ಪು ಮಾಡಿದವರನ್ನು ಮನೆಗೆ ಕಳುಹಿಸಬೇಕು. ಈ ಘಟನೆಯ ಜವಾಬ್ದಾರಿಯನ್ನು ಪೊಲೀಸರು ಮತ್ತು ರಾಜ್ಯ ಸರಕಾರ ಹೊರಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿರುವುದರಿಂದ ಅಮಾಯಕರು ಬಲಿಯಾಗುತ್ತಿರುವ’ ವಿಷಯದ ಬಗ್ಗೆ ನಿಯಮ 69ರಡಿ ಮಾತನಾಡಿದ ಅವರು, ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡಿದ ಶಾಸಕ ಸೋಮಶೇಖರ್ ರೆಡ್ಡಿ, ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ದಾಖಲಾಗದ ದೇಶದ್ರೋಹದ ಪ್ರಕರಣಗಳು ನಮ್ಮ ಪಕ್ಷದ ನಾಯಕರ ವಿರುದ್ಧ ಮಾತ್ರ ಏಕೆ ದಾಖಲಾಗಿವೆ. ಇದಕ್ಕೆ ಪೊಲೀಸ್ ರಾಜ್ಯವೆನ್ನದೆ ಬೇರೇನು ಕರೆಯಲು ಸಾಧ್ಯ? ಎಂದು ವಾಗ್ದಾಳಿ ನಡೆಸಿದರು.

‘ಸಿಎಎ-ಎನ್‌ಆರ್‌ಸಿ ವಿರೋಧಿಸಿ ಕವಿತೆ ಓದಿದ್ದ ಸಿರಾಜ್ ಬಿಸರಳ್ಳಿ ಮತ್ತು ಪತ್ರಕರ್ತ ರಾಜ್‌ಬಕ್ಷಿ ಅವರ ಬಂಧನ ಭವಿಷ್ಯದ ಕರಾಳ ದಿನಗಳ ಸೂಚನೆ. ಪ್ರತಿರೋಧವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಸುಕುತ್ತಿರುವುದು ಅದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಅವರು ಟೀಕಿಸಿದರು.

‘ಮಂಗಳೂರು ಗೋಲಿಬಾರ್‌ಗೆ ಮುನ್ನ ದಿನ ಸಿಎಂ ಬಿಎಸ್‌ವೈ ರಾಜ್ಯದಲ್ಲಿ ಲಾಠಿ ಚಾರ್ಜ್ ಮಾಡದಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದರು, ಮರುದಿನವೇ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಮೃತರಾದರು. ರಾಜ್ಯದಲ್ಲಿ ಸಿಎಂ ಆದೇಶ ಮೀರಿ ಆದೇಶ ನೀಡುವ ಕಾಣದ ಕೈಗಳಿವೆ. ಇಲ್ಲದಿದ್ದರೆ ಆದೇಶವಿಲ್ಲದೆ ಲಾಠಿ ಚಾರ್ಜ್, ಗೋಲಿಬಾರ್ ಮಾಡಲು ಹೇಗೆ ಸಾಧ್ಯ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ 21 ಜನರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಅವರ ಜೊತೆಯಲ್ಲಿದ್ದ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದಾರೆ. ಬಂಧನಕ್ಕೊಳಗಾದವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದಾದರೆ ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಮಾಯಕರಲ್ಲವೇ?’ ಎಂದು ಸಿದ್ದರಾಮಯ್ಯ ಕೇಳಿದರು.

‘ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಿಸಿಟಿವಿ ವೀಡಿಯೊ ಹಾಗೂ ಫೋಟೋಗಳಲ್ಲಿ ತೋರಿಸಿರುವಂತೆ ಪ್ರತಿಭಟನಾಕಾರರು ಮಾರಕಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಆಧಾರಗಳನ್ನು ಹಾಜರುಪಡಿಸಿಲ್ಲ ಹಾಗೂ ಈ ವೇಳೆ ಏನು 21 ಜನರನ್ನು ಬಂಧಿಸಲಾಗಿತ್ತು, ಅವರಲ್ಲಿ ಯಾರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ’ ಎಂದು ಸಿದ್ದರಾಮಯ್ಯ ಹೈಕೋರ್ಟ್‌ನ ಆದೇಶದ ಪ್ರತಿಯನ್ನು ಸದನದಲ್ಲಿ ಓದಿದರು.

‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಮಂಗಳೂರಿಗೆ ತೆರಳಿ ಪರಿಸ್ಥಿತಿಯ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ, ಆ ದಿನ 144 ಸೆಕ್ಷನ್ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದೆ’ ಎಂದು ಸಿದ್ದರಾಮಯ್ಯ ಗಮನ ಸೆಳೆದರು.

‘ಮಂಗಳೂರಿನ ಸ್ಟೇಟ್ ಬ್ಯಾಂಕ್ ಎಂಬ ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಲ್ಲದೆ, 144 ಸೆಕ್ಷನ್ ಬಗ್ಗೆ ಮಾಹಿತಿಯಿಲ್ಲದೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರರ ಮನವೊಲಿಸಿ ಮನೆಗೆ ಕಳುಹಿಸುವ ಬದಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಬಲಿ ಪಡೆದರು ಎಂದು ಸಿದ್ದರಾಮಯ್ಯ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ ಸ್ಥಳೀಯರು ಡಿ.18ರ ಬೆಳಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದರು. ಆದರೆ ಅದೇ ದಿನ ಸಂಜೆ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿತು. ಈ ವಿಚಾರ ಹೆಚ್ಚು ಪ್ರಚಾರವಾಗದ ಕಾರಣ, ಡಿ.19ರಂದು 100 ರಿಂದ 150ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು’ ಎಂದು ಅವರು ಮಂಗಳೂರು ಘಟನೆಯನ್ನು ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರಕಾರ ರೂಪಿಸಿ, ಜಾರಿಗೊಳಿಸುವ ಯಾವುದೆ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಮಂಗಳೂರು ಗೋಲಿಬಾರ್ ಪ್ರಕರಣ ಪೊಲೀಸರ ಪೂರ್ವ ನಿಯೋಜಿತ ಕೃತ್ಯ, ಪ್ರತಿಭಟನೆಯನ್ನು ಪಾಲ್ಗೊಂಡಿದ್ದ ಯಾರೊಬ್ಬರೂ ಯಾವುದೇ ಮಾರಕಾಸ್ತ್ರಗಳನ್ನು ಹೊಂದಿರಲಿಲ್ಲ. ಈ ಬಗ್ಗೆ ಯಾವುದೇ ಸಾಕ್ಷಾಧಾರಗಳನ್ನು ಪೊಲೀಸರು ನೀಡಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಬಂಧನಕ್ಕೊಳಗಾಗಿದ್ದ 21 ಜನರಿಗೆ ಜಾಮೀನು ಮಂಜೂರು ಮಾಡಿದೆ ಹಾಗೂ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News