ಮಂಗಳೂರು ಗೋಲಿಬಾರ್, 'ದೇಶದ್ರೋಹ' ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ

Update: 2020-02-19 11:59 GMT

ಬೆಂಗಳೂರು, ಫೆ.19: ಮಂಗಳೂರು ಗೋಲಿಬಾರ್ ಪ್ರಕರಣ, ಬೀದರ್‌ನ ಶಾಹೀನ್ ಸಂಸ್ಥೆ, ಶಿಕ್ಷಕರು, ಪೋಷಕರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಹಾಗೂ ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಪ್ರಕರಣಗಳನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಇಲ್ಲವೆ ಸದನ ಸಮಿತಿ ಮೂಲಕ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿಧಾನಪರಿಷತ್‌ನಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಬುಧವಾರ ನಿಯಮ 68ರಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ, ಜಯಮಾಲಾ, ನಸೀರ್ ಅಹ್ಮದ್, ಆರ್.ಬಿ.ತಿಮ್ಮಾಪುರ, ಪ್ರಕಾಶ್ ರಾಠೋಡ್, ಜೆಡಿಎಸ್ ನ ಬಿ.ಎಂ.ಫಾರೂಖ್ ಸೇರಿದಂತೆ ಹಲವು ಸದಸ್ಯರು ನ್ಯಾಯಾಂಗ ತನಿಖೆ ನಡೆಸಿ, ಸತ್ಯಾಸತ್ಯತೆಗಳನ್ನು ಜನತೆಯ ಮುಂದಿಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಮಾತನಾಡಿ, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ನಂತರ ತಾವು ತೆಗೆದುಕೊಂಡ ಪ್ರಮಾಣವನ್ನೇ ಮರೆತು ಬಿಡುತ್ತಾರೆ. ಬಿಜೆಪಿ ಶಾಸಕರಾದ ರೇಣುಕಾಚಾರ್ಯ, ಯತ್ನಾಳ್, ಬಳ್ಳಾರಿಯ ಕೆಲ ಶಾಸಕರು ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿಕೆಯನ್ನು ತಿರುಚಿ ಅವರ ಮೇಲೆ ದೂರು ದಾಖಲಿಸಲಾಗಿದೆ. ಇದ್ಯಾವ ನ್ಯಾಯ ಎಂದು ಸರಕಾರವನ್ನು ಪ್ರಶ್ನಿಸಿದರು

ನಮ್ಮ ಕಡೆ ಗಾದೆಯೊಂದಿದೆ, ಯಾರ ಹತ್ತಿರ ಲಾಠಿ ಇರುತ್ತದೋ ಅವರದೇ ಎಮ್ಮೆ ಎನ್ನುವ ಹಾಗೆ ಸರಕಾರದ ನಿರ್ಧಾರ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ವಿರೋಧಿಸಿ, ಪ್ರತಿಭಟನೆ ನಡೆಸುವವರಿಗೆ 10 ಲಕ್ಷ ರೂ.ಮುಂಗಡ ಪಾವತಿಸಿ ಹಾಗೂ ಮುಚ್ಚಳಿಕೆ ಬರೆದುಕೊಡಿ ಎಂದು ಪೊಲೀಸರು ಸಂಘಟನೆಗಳನ್ನು ಕೇಳುತ್ತಾರೆ. ಪ್ರತಿಭಟನೆ ಮಾಡುವವರ ಬಳಿ ಇಷ್ಟೊಂದು ಹಣ ಎಲ್ಲಿರುತ್ತದೆ. ಇಂತಹ ಸರಕಾರದ ನಿಲುವುಗಳು ಸರಿಯಲ್ಲವೆಂದು ಟೀಕಿಸಿದರು.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಬದುಕಬಾರದೆ. ನಾವು ಈ ದೇಶದ ಪ್ರಜೆಗಳು, ಬದುಕಲು ಬಿಡಿ, ಪೊಲೀಸರಿಂದ ಹೊಡಿಸಿಕೊಳ್ಳುವುದಷ್ಟೇ ನಮ್ಮ ಕೆಲಸವಾ ಎಂದು ಪ್ರಶ್ನಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಗಲಾಟೆ, ಗಲಭೆಗಳನ್ನು ಸರಕಾರ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಮತ್ತೊಮ್ಮೆ ಸರಕಾರವನ್ನು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರ ಗೋಲಿಬಾರ್‌ನಿಂದಾಗಿ ಅಮಾಯಕರು ಬಲಿಯಾಗಿದ್ದಾರೆ. ಇವರಿಗೆ ಗೋಲಿಬಾರ್ ನಡೆಸಲು ಅನುಮತಿ ಕೊಟ್ಟವರು ಯಾರು. ಗೋಲಿಬಾರ್ ನಡೆಸಿದ ಸರಕಾರಗಳು ಯಾವ ಕಾರಣಕ್ಕೂ ಉಳಿಯುವುದಿಲ್ಲವೆಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News