ನೂತನ ಸಚಿವರ ಗೈರು: ಸರಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2020-02-19 12:06 GMT

ಬೆಂಗಳೂರು, ಫೆ. 19: ‘ನೂತನ ಸಚಿವರಿಗೇ ಸದನಕ್ಕೆ ಬರುವ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಎರಡೇ ದಿನಕ್ಕೆ ಹೀಗಾದರೆ ಅಧಿವೇಶನವನ್ನು ಏಕೆ ಕರೆಯಬೇಕು. ಸದನದಲ್ಲಿ ಸಚಿವರೇ ಇಲ್ಲವೆಂದರೆ ನಾವು ಯಾರಿಗೆ ಮಾತನಾಡಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರ ಗೈರು ಹಾಜರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ‘ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹಾಳಾಗಿರುವುದರಿಂದ ಅಮಾಯಕರು ಬಲಿಯಾಗುತ್ತಿರುವ’ ವಿಷಯದ ಬಗ್ಗೆ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪಾವಧಿ ಚರ್ಚೆ ಆರಂಭಿಸಿದರು. ಆದರೆ, ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ಕುರ್ಚಿಗಳೆಲ್ಲ ಖಾಲಿ ಇದ್ದವು. ‘ಹಿರಿಯ ಸಚಿವರು ಇಲ್ಲ, ಡಾ.ಕೆ.ಸುಧಾಕರ್ ಅವರನ್ನು ಹೊರತುಪಡಿಸಿದರೆ ನೂತನ ಸಚಿವರು ಬಂದಿಲ್ಲ. ಅಧಿವೇಶನ ಆರಂಭವಾದ ಎರಡನೇ ದಿನಕ್ಕೆ ಹೀಗೆ ಸಚಿವರು ಆಸಕ್ತಿ ಕಳೆದುಕೊಂಡರೆ ಹೇಗೆ?’ ಎಂದು ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಚಿವರ ಗೈರು ಹಾಜರಿ ಒಂದು ರೋಗ, ಇದು ಬಹಳ ದಿನಗಳಿಂದಲೂ ಇದೆ. ಸಚಿವರೂ ಇಲ್ಲ, ಶಾಸಕರೂ ಇಲ್ಲ ಎಂದರೆ ಯಾರಿಗಾಗಿ ಮಾತನಾಡಬೇಕು. ನಮ್ಮದು ಒಂದು ರೀತಿಯಲ್ಲಿ ಅರಣ್ಯರೋದನ ಆಗುತ್ತದೆ. ಟೀಕೆ ಮಾಡಲಿಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ. ಗೃಹ ಇಲಾಖೆ ಬಗ್ಗೆ ಚರ್ಚೆ ಕೂಡಲೇ ಗೃಹ ಸಚಿವರನ್ನು ಕರೆಸಿ ಎಂದು ಸಿದ್ದರಾಮಯ್ಯ ಕೋರಿದರು.

ಈ ವೇಳೆ ಎದ್ದುನಿಂತ ಸಚಿವ ಕೆ.ಎಸ್.ಈಶ್ವರಪ್ಪ, ನೂತನ ಸಚಿವರು ಕಚೇರಿಗಳಿಗೆ ಪೂಜೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಲ್ಪ ತಡವಾಗಿ ಬರುತ್ತಾರೆ. ಆದರೂ ನೀವು ಮಾತನಾಡಿ. ಕೆಲವರು ವಿಧಾನ ಪರಿಷತ್ ಕಲಾಪಕ್ಕೆ ತೆರಳಿದ್ದಾರೆ ಎಂದು ಸಮರ್ಥನೆಗೆ ಮುಂದಾದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಚಿವರು ಹಾಗೂ ಅಧಿಕಾರಿಗಳು ನಿಗದಿತ ಸಮಯಕ್ಕೆ ಸದನಕ್ಕೆ ಹಾಜರಾಗಬೇಕೆಂಬ ನಿಯಮವಿದೆ. ಆದರೂ, ಈ ರೀತಿಯ ಗೈರು ಹಾಜರಿ ಸರಿಯಲ್ಲ. ಸಚಿವರಿಗೆ ಸ್ವಯಂ ಜವಾಬ್ದಾರಿ ಬರಬೇಕು. ಇದನ್ನು ಅವರೇ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಸದನದಲ್ಲಿ ಯಾರ್ಯಾರು ಸಚಿವರು ಇಂದು ಹಾಜರಿರಬೇಕು ಎಂಬ ಪಟ್ಟಿ ಇಲ್ಲಿದೆ. ಸರಕಾರದ ಮುಖ್ಯ ಸಚೇತಕರು ಕೂಡಲೇ ಅವರನ್ನು ಸದನಕ್ಕೆ ಕರೆಸುವ ಕೆಲಸ ಮಾಡಬೇಕೆಂದು ಕಾಗೇರಿ ಸರಕಾರಕ್ಕೆ ಸೂಚಿಸಿದರು. ಈ ವೇಳೆ ಸದನಕ್ಕೆ ಧಾವಿಸಿ ಬಂದ ಗೃಹ ಸಚಿವ ಬವಸರಾಜ ಬೊಮ್ಮಾಯಿ ‘ಸದನಕ್ಕೆ ಬರುವುದು ತಡವಾಯಿತು, ಕ್ಷಮೆ ಇರಲಿ’ ಎಂದು ಹೇಳಿದ್ದರಿಂದ ಚರ್ಚೆಗೆ ವಿರಾಮ ಬಿತ್ತು.

ಸದನ ನಡೆಸುವ ಇಚ್ಛೆ ಸರಕಾರಕ್ಕೆ ಇಲ್ಲವೇ?

‘ಸಚಿವರ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಹೊರತುಪಡಿಸಿ ಮತ್ತೊಬ್ಬ ಸಚಿವರಿಲ್ಲ. ಸರಕಾರಕ್ಕೆ ಸದನ ನಡೆಸುವ ಇಚ್ಛೆಯೇ ಇದ್ದಂತಿಲ್ಲ. ಹೀಗಾದರೆ ಅಧಿವೇಶನವನ್ನು ಕರೆದಿರುವುದು ಏಕೆ?’

-ಪಿ.ಟಿ.ಪರಮೇಶ್ವರ್ ನಾಯ್ಕ, ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News