ಸದನದಲ್ಲಿ ಕವಿ ಸಿರಾಜ್ ಬಿಸರಳ್ಳಿಯ ಕವನ ವಾಚಿಸಿದ ಮಾಜಿ ಸಿಎಂ ಕುಮಾರಸ್ವಾಮಿ

Update: 2020-02-19 12:40 GMT

ಬೆಂಗಳೂರು, ಫೆ.19: ದೇಶದ್ರೋಹದ ಪ್ರಕರಣ ದಾಖಲಿಸಲು ಕಾರಣವಾಗಿದ್ದ ಕವಿ ಸಿರಾಜ್ ಬಿಸರಳ್ಳಿ ಅವರ ಕವನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ವಾಚಿಸಿದ್ದಾರೆ.

ಕವಿತೆ ಓದಿದ ಕಾರಣಕ್ಕೆ ಪೊಲೀಸರ ವಶದಲ್ಲಿರುವ ಕವಿ ಸಿರಾಜ್ ಬಿಸರಳ್ಳಿ ಅವರ, 'ನಿನ್ನ ದಾಖಲೆ ಯಾವಾಗ ನೀಡುತ್ತಿ?' ಎಂಬ ಕವನವನ್ನು ಕುಮಾರಸ್ವಾಮಿ ಅಧಿವೇಶನದಲ್ಲಿ ಓದಿದರು. ಅಲ್ಲದೇ, ಈ ಕವಿತೆಯಲ್ಲಿ ದೇಶದ್ರೋಹ ಕೇಸ್ ದಾಖಲಿಸುವಂತದ್ದು ಏನಿದೆ? ಎಂದು ಸರಕಾರಕ್ಕೆ ಪ್ರಶ್ನಿಸಿದರು.

ಈ ಹಿಂದೆ ಪ್ರಖ್ಯಾತ ಕವಿ ನಿಸಾರ್ ಅಹ್ಮದ್ ಅವರು ಕುರಿಗಳು ಸಾರ್ ಕುರಿಗಳು ಕವಿತೆ ಬರೆದಿದ್ದರು. ಅದು ಕೂಡಾ ನಮ್ಮ ನಿಮ್ಮಂಥವರ ಕುರಿತು ಬರೆದ ಕವನ. ಆದರೆ ಸರಕಾರ ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ ಎಂದು ನೆನಪಿಸಿದ ಕುಮಾರಸ್ವಾಮಿ, ಅಡಿಗ ಅವರು ಬರೆದ ಕವನವೂ ಭಾರೀ ಚರ್ಚೆಗೆ ಕಾರಣವಾಗಿತ್ತು ಎಂದು ಹೇಳಿದರು.

ಕುಮಾರಸ್ವಾಮಿ ವಾಚಿಸಿದ ಸಿರಾಜ್ ಬಿಸರಳ್ಳಿ ಅವರ ಕವನದ ಸಾಲುಗಳು

ಆಧಾರು, ರೇಷನ್ ಕಾರ್ಡ್ ಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳುತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?

ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ ?

ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅವರೊಂದಿಗೆ ಕನ್ನಡ ನೆಟ್ ಸಂಪಾದಕರಾದ ರಾಜಬಕ್ಷಿಯವರನ್ನು ಕವರ ಶೇರ್ ಮಾಡಿದ ಆರೋಪದ ಮೇಲೆ  ಪ್ರಕರಣ ದಾಖಲಿಸಿದ್ದರು. ನಿನ್ನೆ ಅವರಿಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿ ಮದ್ಯಂತರ ಜಾಮೀನಿಗೆ ಆರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು, ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News