ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಕರಣ ಖಂಡಿಸಿ ಕವನ ವಾಚಿಸಿ ಪ್ರತಿಭಟನೆ

Update: 2020-02-19 14:47 GMT

ಬೆಂಗಳೂರು, ಫೆ.19: ‘ನಿನ್ನ ದಾಖಲೆ ಯಾವಾಗ ಕೊಡುತ್ತಿ?’ ಎಂಬ ಕವನ ಮಾಡಿದ್ದಕ್ಕಾಗಿ ಕವಿ ಸಿರಾಜ್ ಬಿಸರಳ್ಳಿ ಹಾಗೂ ಕವನವನ್ನು ಪ್ರಕಟಿಸಿದ್ದಕ್ಕಾಗಿ ರಾಜಾಬಕ್ಷಿ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಬುಧವಾರ ಟೌನ್‌ಹಾಲ್ ಮುಂಭಾಗ ಕವನ ವಾಚಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಎಂ.ಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಕವಿಗಳನ್ನು ಬಂಧಿಸುವುದು ಬಿಜೆಪಿ ಸರಕಾರದ ಫ್ಯಾಶಿಸ್ಟ್ ಧೋರಣೆಯಾಗಿದೆ. ಅಂದು ಬ್ರಿಟಿಷರ ಸರಕಾರವನ್ನು ಟೀಕಿಸಿ ಕವನ ಬರೆದಿದ್ದಕ್ಕಾಗಿ ವರಕವಿ ದ.ರಾ.ಬೇಂದ್ರೆಯವರನ್ನು ಬಂಧಿಸಿತ್ತು. ಇಂದು ಬ್ರಿಟಿಷ್ ಧೋರಣೆ ಹೊಂದಿದ ಬಿಜೆಪಿಯೂ ಕವಿಗಳನ್ನು ಬಂಧಿಸುವ ಮೂಲಕ ತಾನೊಂದು ಫ್ಯಾಶಿಸ್ಟ್ ಸರಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗೋಲಿ ಮಾರೋ ಸಾಲೋಂಕೊ’ ಎನ್ನುವ ಬಿಜೆಪಿ ಮಂತ್ರಿಗಳಿಗೆ ಉನ್ನತ ಹುದ್ದೆ, ಜವಾಬ್ದಾರಿ ಕೊಡುತ್ತಿರುವಾಗ ಕವಿಗಳನ್ನು ಜೈಲಿಗಟ್ಟುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ದೇಶದೊಳಗೆ ತುರ್ತು ಪರಿಸ್ಥಿತಿ ತಂದಿರುವುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗಿದೆ. ಪ್ರಶ್ನಿಸುವುದು ಪ್ರಜಾಪ್ರಭುತ್ವ ಬಲಗೊಳಿಸುವ ಆಯಾಮವೂ ಆಗಿದೆ. ಆದರೆ, ಪ್ರಶ್ನಿಸುವ ಮತ್ತು ಕಾವ್ಯ ರಚನೆ ಮಾಡುವ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟ ಬಜೆಪಿ ಸರಕಾರದ ನಿಲುವು ತೀವ್ರ ಖಂಡನಾರ್ಹವಾಗಿದೆ. ಈ ಕೂಡಲೇ ಬಿಜೆಪಿ ಸರಕಾರ ಕವಿ ಸಿರಾಜ್ ಬಿಸರಳ್ಳಿ ಹಾಗೂ ರಾಜಾಬಕ್ಷಿ ಅವರ ಮೇಲಿರುವ ಕೇಸನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತೆ ಡಾ. ವಿಜಯಾ, ಚಲನಚಿತ್ರ ನಿರ್ದೇಶಕ ಕೇಸರಿ ಹರವು, ವಕೀಲ ಅನಂತ್ ನಾಯ್ಕ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ಲಲಿತಾ ಶೆಣೈ, ಜಿಲ್ಲಾ ಸಂಚಾಲಕಿ ಬಸಮ್ಮ, ಎಸ್‌ಎಫ್‌ಐ ರಾಜ್ಯ ಪದಾಧಿಕಾರಿಗಳಾದ ಗಾಯತ್ರಿ, ಭೀಮನಗೌಡ, ಶಿವಕುಮಾರ್ ಮ್ಯಾಗಳಮನಿ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News