ಸಮರ್ಥ ವಾದ ಮಂಡಿಸದ ವಕೀಲರನ್ನು ಏಕೆ ಇಟ್ಟುಕೊಂಡಿದ್ದೀರಿ: ಕುಮಾರಸ್ವಾಮಿ ಪ್ರಶ್ನೆ

Update: 2020-02-19 14:20 GMT

ಬೆಂಗಳೂರು, ಫೆ. 19: ‘ಕ್ಷುಲ್ಲಕ ಪ್ರಕರಣಗಳಲ್ಲಿ ವಾದ ಮಾಡುವ ಸರಕಾರದ ಪರ ವಕೀಲರು ಮಂಗಳೂರು ಗಲಭೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಸಮರ್ಥ ವಾದ ಮಂಡಿಸದಿರುವುದು ಕಾನೂನು ಇಲಾಖೆ ವೈಫಲ್ಯಕ್ಕೆ ಸಾಕ್ಷಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿರುವುದರಿಂದ ಅಮಾಯಕರು ಬಲಿಯಾಗುತ್ತಿರುವ’ ವಿಷಯದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಸರಕಾರದ ಪರ ಸಮರ್ಥವಾಗಿ ವಾದ ಮಂಡಿಸದ ವಕೀಲರನ್ನು ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

‘ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಜಾಮೀನು ನೀಡಬೇಡಿ ಎಂದು ಸರಕಾರದ ವಕೀಲರು ಗಂಭೀರ ಸ್ವರೂಪದ ವಾದ ಮಾಡುತ್ತಾರೆ. ಆದರೆ, ಗಂಭೀರ ಸ್ವರೂಪದ ಪ್ರಕರಣದಲ್ಲಿ ನಿಜವಾಗಿಯೂ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಿದ್ದರೆ ಸರಕಾರಿ ವಕೀಲರು ವಾದ ಮಾಡುವಲ್ಲಿ ವಿಫಲವಾಗಿದ್ದೇಕೆ? ಸೂಕ್ತ ಸಾಕ್ಷಾಧಾರಗಳನ್ನು ಕೋರ್ಟ್‌ಗೆ ಏಕೆ ನೀಡಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕೋರ್ಟ್ ಜಾಮೀನು ಅರ್ಜಿಯನ್ನಷ್ಟೇ ವಿಚಾರಣೆ ನಡೆಸಿದೆ. ಇದು ಅಂತಿಮ ತೀರ್ಪು ಅಲ್ಲ. ತನಿಖೆ ಇನ್ನೂ ಬಾಕಿ ಇದೆ. ದೋಷಾರೋಪಣ ಪಟ್ಟಿ ಸಲ್ಲಿಸುವ ವೇಳೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲ ಸಾಕ್ಷಾಧಾರಗಳನ್ನು ಕೋರ್ಟ್‌ಗೆ ನೀಡಲಾಗುವುದು ಎಂದು ಸಮರ್ಥಿಸಲು ಮುಂದಾದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್, ಹೈಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಿದೆ. ಕನಿಷ್ಟ ನೈತಿಕತೆ ಇದ್ದರೆ ಗೃಹ ಸಚಿವರು ಮತ್ತು ಕಾನೂನು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ನಿಷೇಧಾಜ್ಞೆ ಪೊಲೀಸರ ಅತಿರೇಕದ ವರ್ತನೆ ಎಂದು ಕೋರ್ಟ್ ತಿಳಿಸಿದೆ ಎಂದು ಟೀಕಿಸಿದರು.

ಇದು ಅತ್ಯಂತ ಸೂಕ್ಷ್ಮ ವಿಚಾರ. ಇಬ್ಬರು ಅಮಾಯಕರ ಬಲಿ ಪಡೆದಿದ್ದು, ಮಂಗಳೂರು ಗೋಲಿಬಾರ್ ಕೃತ್ಯಕ್ಕೆ ರಾಜ್ಯ ಸರಕಾರವೇ ಕಾರಣ. ಇವರಿಗೆ ಕನಿಷ್ಟ ಮಾನವೀಯತೆ ಇದ್ದರೆ ಈ ಕೃತ್ಯದ ಹೊಣೆಯನ್ನು ಸರಕಾರ ಹೊರಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News