ಬಳ್ಳಾರಿ ಕಾರು ಅಪಘಾತ ಪ್ರಕರಣ: ನ್ಯಾಯಾಂಗ ತನಿಖೆಗೆ ಜಯಮಾಲಾ ಒತ್ತಾಯ

Update: 2020-02-19 15:57 GMT

ಬೆಂಗಳೂರು, ಫೆ.19: ಬಳ್ಳಾರಿಯ ಹೊಸಪೇಟೆ ಸಮೀಪ ನಡೆದ ಕಾರು ಅಪಘಾತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವೆ ಜಯಮಾಲಾ ಒತ್ತಾಯಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ನಿಯಮ 330ರಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಳ್ಳಾರಿ ಕಾರು ಅಪಘಾತ ಪ್ರಕರಣದಲ್ಲಿ ಸಚಿವರ ಮಗ ಹಾಗೂ ಕಾರು ಚಾಲನೆ ಮಾಡಿದ್ದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿಲ್ಲ. ಈಗಲೂ ಸತ್ಯಾಂಶ ಏನೆಂದು ಯಾರಿಗೂ ತಿಳಿಯುತ್ತಿಲ್ಲವೆಂದರು.

ಈ ಪ್ರಕರಣದಲ್ಲಿ ಸಚಿವರು, ಪೊಲೀಸರು ಒಂದೊಂದು ರೀತಿ ಹೇಳಿಕೆ ಕೊಡುತ್ತಾರೆ. ರಾತ್ರೋರಾತ್ರಿ ಆಸ್ಪತ್ರೆಗೆ ಹೋಗಿ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಆಸ್ಪತ್ರೆ ನರ್ಸ್ ಕೂಡ ಪ್ರಭಾವಿ ಸಚಿವರ ಪುತ್ರ ಬಂದಿದ್ದನ್ನು ಬಹಿರಂಗಪಡಿಸಿದ್ದಾರೆ. ಆದರೆ, ಸಚಿವರು ಮಾತ್ರ ನನ್ನ ಮಗನಿಗೂ ಅದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ. ಒಂದು ಕಣ್ಣಿಗೆ ಬಣ್ಣ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ವಿಷಯಾಂತರ ಮಾಡುತ್ತಿದೆ. ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News