ಕಲಾಪದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾದ ಎಸ್.ಟಿ.ಸೋಮಶೇಖರ್ ಹೇಳಿಕೆ

Update: 2020-02-19 16:42 GMT

ಬೆಂಗಳೂರು, ಫೆ.19: ಅನರ್ಹ ಎಂದು ಪಟ್ಟ ಕಟ್ಟಿಕೊಂಡು, ಮೈತ್ರಿ ಸರಕಾರ ಜಾರಿ ಬಿದ್ದಿದ್ದಕ್ಕೆ ಹೆಚ್ಚು ಖುಷಿಪಟ್ಟಿದ್ದು ಎಚ್.ಎಂ.ರೇವಣ್ಣ. ನಮ್ಮ ನಡುವೆ ಈಗಲೂ ಒಂದು ರೀತಿಯ ಸಹಕಾರ, ಒಡಂಬಡಿಕೆ ಇದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ ಮಾತುಗಳು ಕಲಾಪದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಬುಧವಾರ ಮಧ್ಯಾಹ್ನ ಭೋಜನ ವಿರಾಮದ ನಂತರ ವಿಧಾನ ಪರಿಷತ್ತಿನ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಬಿಜೆಪಿ ಸದಸ್ಯ ಪ್ರಾಣೇಶ್, ಲೋಕಸಭೆ ಪ್ರವೇಶಿಸಲು ಈ ದೇಶದ ಜನರು ನಮಗೆ ಬಹುಮತ ಕೊಟ್ಟಿದ್ದಾರೆ. ಹೀಗಾಗಿಯೇ, ಪ್ರಣಾಳಿಕೆಯಲ್ಲಿದ್ದ ಅಂಶದಂತೆ ಸಿಎಎ ಜಾರಿಗೊಳಿಸಿದ್ದೇವೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್.ಆರ್.ಪಾಟೀಲ್, ನಿಮಗೆ ಶೇಕಡವಾರು 37 ರಷ್ಟು ಮತ ಬಂದಿದೆ. ಉಳಿದಿದ್ದು ನಿಮಗೆ ವಿರೋಧ ಮತ ಎಂದು ತಿಳಿಸಿದರು.

ಈ ವೇಳೆ ಎಚ್.ಎಂ.ರೇವಣ್ಣ, 'ಯಡಿಯೂರಪ್ಪ ಮುಖ್ಯಮಂತ್ರಿ ಆಗೋದಕ್ಕೆ ಬಹುಮತ ಇತ್ತಾ. ನಮ್ಮವರನ್ನ ಎಳೆದುಕೊಂಡು ಹೋಗಿ ಸರಕಾರ ಮಾಡಿದ್ದೀರಾ ಎಂದು ಪ್ರಶ್ನೆ ಹಾಕಿದರು.

ನಮ್ಮನ್ನ ಯಾರು ಎಳೆದುಕೊಂಡು ಹೋಗಿಲ್ಲ. ನಾವೇ ಬಿಜೆಪಿಗೆ ಬಂದು ಗೆದ್ದಿದ್ದೇವೆ ಎಂದು ನೂತನ ಸಚಿವರಾದ ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್, ಎಸ್.ಟಿ ಸೋಮಶೇಖರ್ ಉತ್ತರಿಸಿದರು. ಮಾತು ಮುಂದುವರೆಸಿದ ಎಸ್.ಟಿ ಸೋಮಶೇಖರ್, ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಆಗಲು ಬಹುಮತ ಇತ್ತೇ ಎಂದು ಮರು ಪ್ರಶ್ನೆ ಮಾಡಿದರು.

ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಇವರು ಬಿಜೆಪಿಗೆ ಬಂದಿದ್ದಕ್ಕೆ ನಿಮಗೂ ಖುಷಿಯಾಗಿದೆ. ನಿಮ್ಮ ಹಾಗೂ ಇವರ ನಡುವೆ ಒಡಂಬಡಿಕೆ, ವಿಶ್ವಾಸದ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ನೀವು ತುಂಬಾ ಬುದ್ಧಿವಂತರಿದ್ದೀರಿ, ಯಾವುದೇ ಚುನಾವಣೆ ಇಲ್ಲದೆ, ಉಪಮುಖ್ಯಮಂತ್ರಿ ಆಗಿದ್ದೀರಿ ಎಂದು ಎಚ್.ಎಂ.ರೇವಣ್ಣ ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News