ಆತ್ಮಸಾಕ್ಷಿಗೆ ಅನುಗುಣವಾಗಿ ಸಿಎಂ ಕೆಲಸ ಮಾಡಲಿ: ಎಚ್‌ಡಿಕೆ

Update: 2020-02-19 17:45 GMT

ಬೆಂಗಳೂರು, ಫೆ.19: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೋ ಸಂಘಟನೆಗಳ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುವಂತಾಗಬಾರದು. ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಮಂಗಳೂರು ಗೋಲಿಬಾರ್ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಘೋಷಿಸಿ, ಆನಂತರ ಕೆಲವು ಸಂಘಟನೆಗಳ ಒತ್ತಾಯಕ್ಕೆ ಮಣಿದು ಅದನ್ನು ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದರು.

ಹೋರಾಟದಿಂದ ಈ ಹಂತಕ್ಕೆ ಬಂದಿರುವ ಮುಖ್ಯಮಂತ್ರಿ, ಜನಪರವಾಗಿ ಕೆಲಸ ಮಾಡಲಿ. ಯಾವುದೋ ಸಂಘಟನೆಗಳನ್ನು ಮೆಚ್ಚಿಸಲು ಕೆಲಸ ಮಾಡುವುದು ಬೇಡ. ಈ ಘಟನೆಯಲ್ಲಿ ತಪ್ಪು ಮಾಡಿದ ಅಧಿಕಾರಿಗಳನ್ನು ತಕ್ಷಣವೇ ಮುಖ್ಯಮಂತ್ರಿ ಅಮಾನತ್ತು ಮಾಡಿದ್ದರೆ, ಸರಕಾರಕ್ಕೆ ಮುಜುಗರ ಆಗುವುದು ತಪ್ಪುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿ ಗಲಭೆ ನಡೆಸಲು ಕೇರಳದಿಂದ ಕೆಲವು ಬಂದು ಪೂರ್ವ ಯೋಜನೆ ಸಿದ್ಧಪಡಿಸಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆ. ಒಂದು ವೇಳೆ ಪೊಲೀಸರಿಗೆ ಮೊದಲೇ ಈ ಬಗ್ಗೆ ಮಾಹಿತಿ ಸಿಕ್ಕಿದ್ದರೆ, ಅಂದು ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟಿದ್ದಾದರೂ ಯಾಕೆ ಎಂದು ಅವರು ಪ್ರಶ್ನಿಸಿದರು.

ಕೇರಳದಿಂದ ಬಂದು ಗಲಭೆಯಲ್ಲಿ ಪಾಲ್ಗೊಂಡು ಎಷ್ಟು ಮಂದಿಯನ್ನು ಈವರೆಗೆ ನಮ್ಮ ಪೊಲೀಸರು ಬಂಧಿಸಿದ್ದಾರೆ. ಲಾಠಿಚಾರ್ಜ್ ಮಾಡಿದ ಬಳಿಕ ರಸ್ತೆಗಳಲ್ಲಿ ಓಡಾಡುತ್ತಿದ್ದವರನ್ನು ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶ್ರುವಾಯು ಪ್ರಯೋಗ ಮಾಡಿದಾಗ ಧೂಳು ಹಾಗೂ ಹೊಗೆಯಿಂದ ರಕ್ಷಣೆ ಪಡೆಯಲು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದು ಸಾಮಾನ್ಯ. ಅದನ್ನೇ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಬೆಳಗ್ಗೆ ಆರಂಭವಾದ ಪ್ರತಿಭಟನೆಯಲ್ಲಿ ಯಾರಾದರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರೇ ? ಸ್ಥಳೀಯ ಹಾಜಿ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲಿದ್ದ ಕಟ್ಟಡದ ತ್ಯಾಜ್ಯವನ್ನು ಸಾಗಿಸುತ್ತಿದ್ದ ವ್ಯಕ್ತಿ, ಗಲಭೆ ನೋಡಿ ವಾಹನವನ್ನು ಅಲ್ಲೆ ಬಿಟ್ಟು ಬೇರೆ ಕಡೆ ಹೋಗಿದ್ದಾನೆ. ಅದನ್ನು ಕಲ್ಲು ತೂರಾಟ ಮಾಡಲು ತಂದು ನಿಲ್ಲಿಸಿದ್ದಲ್ಲ ಎಂದು ಅವರು ಹೇಳಿದರು.

ಬಿಜೆಪಿಯವರು ಆರೋಪಿಸುತ್ತಿರುವಂತೆ ಒಂದು ವೇಳೆ ಆ ವ್ಯಕ್ತಿ ಕಲ್ಲು ತೂರಾಟ ನಡೆಸಲು ಆ ವಾಹನವನ್ನು ಅಲ್ಲಿಗೆ ತಂದು ನಿಲ್ಲಿಸಿದ್ದೇ ಆಗಿದ್ದಲ್ಲಿ, ಈವರೆಗೆ ಆ ವಾಹನವನ್ನು ಪೊಲೀಸರು ಯಾಕೆ ಜಪ್ತಿ ಮಾಡಿಲ್ಲ. ಆ ವಾಹನ ಚಾಲಕನನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮಂಗಳೂರು ಗಲಭೆಯಲ್ಲಿ ನಿಜವಾಗಿಯೂ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಿದ್ದರೆ ಸರಕಾರಿ ವಕೀಲರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ವೇಳೆ ಯಾಕೆ ಸಮರ್ಥವಾಗಿ ವಾದ ಮಾಡುವಲ್ಲಿ ವಿಫಲವಾದರು? ಇಲ್ಲಿ ಪ್ರದರ್ಶಿಸುತ್ತಿರುವ ಸಾಕ್ಷಾಧಾರಗಳನ್ನು ನ್ಯಾಯಾಲಯದ ಮುಂದೆ ಯಾಕೆ ಹಾಜರುಪಡಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News