ಶಿವಾಜಿ ಇಲ್ಲದಿದ್ದರೆ, ನನ್ನ ತಾಯಿ ಹಣೆ ಮೇಲೆ ಕುಂಕುಮವೇ ಇರುತ್ತಿರಲಿಲ್ಲ: ಸಚಿವ ಸಿ.ಟಿ.ರವಿ

Update: 2020-02-19 18:10 GMT

ಬೆಂಗಳೂರು, ಫೆ.19: ಛತ್ರಪತಿ ಶಿವಾಜಿ ಜನ್ಮವೇ ತಾಳದಿದ್ದರೆ, ಇಂದು ನಮ್ಮ ತಾಯಿಯ ಹಣೆಯ ಮೇಲೆ ಕುಂಕುಮವೇ ಇರುತ್ತಿರಲಿಲ್ಲ. ಇಂತಹ ಸ್ಥಿತಿ ನಿರ್ಮಾಣವಾಗುತಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರು ಅಂದು ಏಕಾಂಗಿ ಹೋರಾಟ ಮಾಡಿ ಹಿಂದು ಸಾಮ್ರಾಜ್ಯ ಕಟ್ಟದಿದ್ದರೆ ಭಾರತ ಮತ್ತೊಂದು ಪಾಕಿಸ್ತಾನ ಅಥವಾ ಅಫಘಾನಿಸ್ತಾನ ಆಗುತಿತ್ತು. ಭಾರತದಲ್ಲಿ ಶಿವಾಜಿ ಜನ್ಮತಾಳದಿದ್ದರೆ ಇಂದು ನಮ್ಮ ತಾಯಂದಿರ ಹಣೆಯಲ್ಲಿ ಕುಂಕುಮ ಇರುತ್ತಿರಲಿಲ್ಲ. ಈಗಲೂ ಹಿಂದುಗಳು ನಾವೆಲ್ಲ ಒಂದೂ ಎಂಬ ಭಾವನೆ ಬೆಳೆಸಿಕೊಳ್ಳದಿದ್ದರೆ ಭಾರತ ಉಳಿಯುವುದಿಲ್ಲ ಎಂದರು.

ಶಿವಾಜಿ ಮಹಾರಾಜರ ಬದುಕು ಮರಾಠಿಗರ ಜತೆಗೆ ಹಿಂದು ಸಾಮ್ರಾಜ್ಯದ ಎಲ್ಲರಿಗೂ ಆದರ್ಶಪ್ರಾಯವಾಗಬೇಕು. ಗಡಿ ವಿವಾದಕ್ಕೆ ಶಿವಾಜಿ ಹೆಸರು ಎಳೆದು ತಂದರೆ ಅವರ ಬದುಕು ಹಾಗೂ ವ್ಯಕ್ತಿತ್ವಕ್ಕೆ ಅಪಚಾರ ಆಗುತ್ತದೆ ಎಂದ ಅವರು, ಶಿವಾಜಿ ಮಹಾರಾಜರನ್ನು ಯಾವುದೋ ಒಂದು ಭಾಷೆ, ಜಾತಿ, ಪ್ರದೇಶಕ್ಕೆ ಸೀಮಿತಗೊಳಿಸುವುದರಿಂದ ಅವರ ಪರಾಕ್ರಮ, ಶೌರ್ಯವನ್ನು ಅಪಮಾನಿಸಿದಂತಾಗುತ್ತದೆ ಎಂದು ಹೇಳಿದರು.

ಈ ಬಾರಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಮಾಡುವ ಆಸೆ ಇತ್ತು. ಕಲಾಪಗಳು ಆರಂಭವಾಗಿರುವುದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಅಲ್ಲಿಯೇ ಮಾಡೋಣ. ಏಕೆಂದರೆ, ಈ ಬ್ಯಾಂಕ್ವೆಟ್ ಹಾಲ್‌ನಲ್ಲಿ ದೇಶಕ್ಕೆ ಕೊಡುಗೆ ನೀಡದವರ ಜಯಂತಿ ಆಚರಣೆ ಮಾಡಲಾಗಿದೆ. ಹೀಗಾಗಿ, ಮುಂದಿನ ಸಾರಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಸಿ.ಟಿ.ರವಿ ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಅಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಸಾಹಿತಿ ಜಗನ್ನಾಥರಾವ್ ಬಹುಳೆ, ಗೋಸಾಯಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಮಂಜುನಾಥ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಚಿವರ ಮರಾಠಿ ಮಾತು

ಶಿವಾಜಿ ಜಯಂತಿಯಲ್ಲಿ ಭಾಗವಹಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ 'ಶಿವಾಜಿ ಜಯಂತಿ ಆಚರಣೆ ಮಾಡುತ್ತಿರುವುದಕ್ಕೆ ಸರಕಾರಕ್ಕೆ ಧನ್ಯವಾದ' ಎಂದರು. ಬಳಿಕ ಮರಾಠಿಯಲ್ಲೇ ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮರಾಠಿಯೇತರ ಸಭಿಕರು ಸಚಿವರ ಮರಾಠಿ ಭಾಷಣ ಅರ್ಥವಾಗದೆ ಪರಸ್ಪರ ಮುಖ ನೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News