ಬಜೆಟ್‌ನಲ್ಲಿ ಹಾಪ್‌ಕಾಮ್ಸ್‌ಗೆ ದೀರ್ಘಾವಧಿ ಸಾಲಕ್ಕಾಗಿ 25 ಕೋಟಿ ರೂ. ಮೀಸಲು: ಸಚಿವ ನಾರಾಯಣಗೌಡ ಭರವಸೆ

Update: 2020-02-19 18:14 GMT

ಬೆಂಗಳೂರು, ಫೆ.19: ಪ್ರಸಕ್ತ ಬಜೆಟ್‌ನಲ್ಲಿ ಹಾಪ್‌ಕಾಮ್ಸ್ ಸಂಸ್ಥೆಗೆ ದೀರ್ಘಾವಧಿ ಸಾಲಕ್ಕಾಗಿ 25 ಕೋಟಿ ರೂ. ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಬುಧವಾರ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್) ವತಿಯಿಂದ ಆಯೋಜಿಸಿದ್ದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಒಟ್ಟು 232 ಹಾಪ್‌ಕಾಮ್ಸ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 20ಕ್ಕೂ ಹೆಚ್ಚು ಮಳಿಗೆಗಳು ಕಾರಣಾಂತರಗಳಿಂದ ಸ್ಥಗಿತಗೊಂಡಿವೆ. ಅವುಗಳನ್ನು ಅಭಿವೃದ್ಧಿ ಪಡಿಸಿ ಶೀಘ್ರವೇ ಕಾರ್ಯಾರಂಭ ಮಾಡಲಾಗುವುದು ಎಂದರು.

ಕಬ್ಬನ್ನು ಪ್ರಧಾನವಾಗಿ ಬೆಳೆಯುತ್ತಿರುವ ಮಂಡ್ಯ ಭಾಗದಲ್ಲೂ ದ್ರಾಕ್ಷಿ, ಕಲ್ಲಂಗಡಿ ಸೇರಿ ಇನ್ನಿತರೆ ಹಣ್ಣುಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗರದ ಎಲ್ಲ ವಾರ್ಡ್‌ಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಿವೆ. ನಗರ ವಿಸ್ತರಣೆಯಾದಂತೆ ಹಾಪ್‌ಕಾಮ್ಸ್ ಮಳಿಗೆಗಳ ಸಂಖ್ಯೆಯೂ ಹೆಚ್ಚಾಗಲಿ ಎಂದರು.

ಹಾಪ್‌ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಸಂಸ್ಥೆಯಡಿ ಪ್ರಸ್ತುತ ಒಂಬತ್ತು ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದು, 10 ಸಾವಿರ ನೋಂದಾಯಿತ ರೈತರಿದ್ದಾರೆ. ಆದರೆ, ಸಂಸ್ಥೆ ನಷ್ಟದಲ್ಲಿದೆ ಎಂದು ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದರು.

ಫೆ.19ರಿಂದ ಮಾರ್ಚ್ 31ರವರೆಗೆ ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳಲ್ಲಿ ಆಯೋಜಿಸಿರುವ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳದ ಅಂಗವಾಗಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಮೇಳದಲ್ಲಿ 15 ತಳಿಯ ದ್ರಾಕ್ಷಿ ಹಾಗೂ 5 ತಳಿಯ ಕಲ್ಲಂಗಡಿ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಿದರು.

ಮೇಳದಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್, ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News