ಏಶ್ಯ ಕಪ್ ಆತಿಥ್ಯ ಹಕ್ಕು ಬಿಟ್ಟು ಕೊಡಲು ಪಾಕಿಸ್ತಾನ ಸಿದ್ಧ

Update: 2020-02-19 18:35 GMT

ಕರಾಚಿ, ಫೆ.19: ಈ ವರ್ಷದ ಏಶ್ಯಕಪ್ ಟ್ವೆಂಟಿ-20 ಟೂರ್ನಮೆಂಟ್‌ನ ಆತಿಥ್ಯದ ಹಕ್ಕನ್ನು ಬಿಟ್ಟುಕೊಡಲು ತಮ್ಮ ದೇಶ ಸಿದ್ಧವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧ್ಯಕ್ಷ ಎಹ್ಸಾನ್ ಮಣಿ ಬುಧವಾರ ಸುಳಿವು ನೀಡಿದ್ದಾರೆ.

ರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಮಣಿ,‘‘ಏಶ್ಯನ್ ಕ್ರಿಕೆಟ್ ಕೌನ್ಸಿಲ್‌ನ(ಎಸಿಸಿ)ಸಂಬಂಧಪಟ್ಟವರ ಒಮ್ಮತದ ಅಭಿಪ್ರಾಯವನ್ನು ಪರಿಗಣಿಸಿ ಏಶ್ಯಕಪ್ ನಡೆಯುವ ಸ್ಥಳದ ಕುರಿತು ನಿರ್ಧಾರ ಮಾಡಲಾಗುವುದು’’ ಎಂದು ತಿಳಿಸಿದರು. ‘‘ಅಸೋಸಿಯೇಟ್ ಸದಸ್ಯರ ಆದಾಯದಲ್ಲಿ ಯಾವುದೇ ಪರಿಣಾಮ ಬೀರದಂತೆ ನಾವು ಖಾತರಿಪಡಿಸಬೇಕು. ಇದು ಪೂರ್ಣಾವಧಿ ಸದಸ್ಯರ ವಿಚಾರವಲ್ಲ. ಅಸೋಸಿಯೇಟ್ ಸದಸ್ಯರಿಗೆ ಸಂಬಂಧಿಸಿದ್ದಾಗಿದೆ’’ ಎಂದು ಮಣಿ ಹೇಳಿದರು.

ಮಾರ್ಚ್‌ನ ಮೊದಲ ವಾರದಲ್ಲಿ ಎಸಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಏಶ್ಯಕಪ್‌ನ ಸ್ಥಳ ಹಾಗೂ ಇತರ ವಿವರ ಅಂತಿಮವಾಗಲಿದೆ.

ಏಶ್ಯಕಪ್ ಟೂರ್ನಮೆಂಟ್ ಆಡಲು ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದ ಬಳಿಕ ಮಣಿ ಈ ಹೇಳಿಕೆ ನೀಡಿದ್ದಾರೆ.

ಭಾರತ 2008ರ ಬಳಿಕ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿಲ್ಲ. ರಾಜಕೀ ಯ ಹಾಗೂ ರಾಜತಾಂತ್ರಿಕ ಸಂಬಂಧಗಳ ಕಾರಣದಿಂದ 2007ರ ಬಳಿಕ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಪಾಕಿಸ್ತಾನ 2012ರಲ್ಲಿ ಸೀಮಿತ ಓವರ್ ಕ್ರಿಕೆಟ್ ಸರಣಿ ಆಡಲು ಕೊನೆಯ ಬಾರಿ ಭಾರತಕ್ಕೆ ಭೇಟಿ ನೀಡಿತ್ತು.

ಭಾರತದಲ್ಲಿ ಪಾಕ್ ವಿರುದ್ಧ ಪಂದ್ಯದ ಆತಿಥ್ಯವಹಿಸಲು ಬಿಸಿಸಿಐ ನಿರಾಕರಿಸಿದ ಹಿನ್ನೆಲೆಯಲ್ಲಿ 2018ರ ಆವೃತ್ತಿಯ ಏಶ್ಯಕಪ್ ಯುಎಇನಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News