ರೊಮಾನಿಯ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಜಯ

Update: 2020-02-19 18:37 GMT

ಹೊಸದಿಲ್ಲಿ, ಫೆ.19: ಭಾರತದ ಅಂಡರ್-17 ಮಹಿಳಾ ಫುಟ್ಬಾಲ್ ತಂಡ ಟರ್ಕಿಯಲ್ಲಿ ಬುಧವಾರ ನಡೆದ ಎರಡನೇ ಸೌಹಾರ್ದ ಪಂದ್ಯದಲ್ಲಿ ರೊಮಾನಿಯ ತಂಡವನ್ನು 1-0 ಅಂತರದಿಂದ ಮಣಿಸಿದೆ.

ಪ್ರಿಯಾಂಕಾ ದೇವಿ 29ನೇ ನಿಮಿಷದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿದರು.

   ರವಿವಾರ ನಡೆದ ಮೊದಲ ಸೌಹಾರ್ದ ಪಂದ್ಯ 3-3ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು. ಬುಧವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಭಾರತೀಯ ತಂಡ ಮುನ್ನಡೆ ಪಡೆಯಲು ತೀವ್ರ ಪ್ರಯತ್ನ ನಡೆಸಿತು. ಕಳೆದ ಪಂದ್ಯದಲ್ಲಿ ಭಾರತದ ಪರ ಮೂರನೇ ಗೋಲು ಗಳಿಸಿದ್ದ ಸುಮತಿ ಕುಮಾರಿ 12ನೇ ನಿಮಿಷದಲ್ಲಿ ಗೋಲು ಗಳಿಸುವ ಸನಿಹ ಬಂದಿದ್ದರು. ಆದರೆ, ಅವರು ಹೊಡೆದ ಚೆಂಡು ಗುರಿ ತಪ್ಪಿತು. ಎರಡು ನಿಮಿಷಗಳ ಬಳಿಕ ಸುನೀತಾ ಮುಂಡಾ ಹೊಡೆದ ಚೆಂಡನ್ನು ರೊಮಾನಿಯದ ಗೋಲ್‌ಕೀಪರ್ ತಡೆದರು. ಭಾರತ ಹಲವು ಬಾರಿ ಫ್ರೀ-ಕಿಕ್ ಅವಕಾಶ ಪಡೆದಿದ್ದು, 28ನೇ ನಿಮಿಷದಲ್ಲಿ ನಿರ್ಮಲಾ ದೇವಿ ಹೊಡೆದ ಚೆಂಡನ್ನು ಎದುರಾಳಿ ಗೋಲ್‌ಕೀಪರ್ ಸೇವ್ ಮಾಡಿದರು. ಒಂದು ನಿಮಿಷ ಕಳೆದ ಬಳಿಕ ಪ್ರಿಯಾಂಕಾ ದೇವಿ ಯಾವುದೇ ತಪ್ಪು ಮಾಡದೇ ಚೆಂಡನ್ನು ಗೋಲು ಪೆಟ್ಟಿಗೆಗೆ ಸುರಕ್ಷಿತವಾಗಿ ತಲುಪಿಸಲು ಸಫಲರಾದರು. ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಸುಮತಿ ಮತ್ತೊಂದು ಗೋಲು ಗಳಿಸುವ ಸನಿಹ ಬಂದಿದ್ದರು. ಆದರೆ, ರೊಮಾನಿಯದ ಗೋಲ್‌ಕೀಪರ್ ಇದಕ್ಕೆ ಅವಕಾಶ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News