ಅಸ್ಸಾಂ ಪೌರತ್ವ ಪಟ್ಟಿಯ ತ್ರಿಶಂಕು ಸ್ಥಿತಿಯಿಂದ 19 ಲಕ್ಷ ಜನರು ಅನಿಶ್ಚಿತತೆಯ ಸುಳಿಯಲ್ಲಿ

Update: 2020-02-20 16:32 GMT

ಗುವಾಹಟಿ, ಫೆ.20: ಸುಮಾರು ಆರು ತಿಂಗಳ ಹಿಂದೆ ಅಸ್ಸಾಮಿನ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ ಹೊರಗಿರಿಸಲ್ಪಟ್ಟಿರುವ ಸುಮಾರು 19 ಲಕ್ಷ ಜನರು ತಮ್ಮ ಭವಿಷ್ಯದ ಕುರಿತು ಅನಿಶ್ಚಿತತೆಯ ಸುಳಿಯಲ್ಲಿ ತೊಳಲಾಡುತ್ತಿದ್ದಾರೆ. ತಮ್ಮನ್ನು ಎನ್‌ಆರ್‌ಸಿಯಿಂದ ಹೊರಗಿರಿಸಿದ್ದನ್ನು ಪ್ರಮಾಣೀಕೃತ ದಾಖಲೆಗಳೊಂದಿಗೆ ವಿದೇಶಿಯರ ನ್ಯಾಯಾಧಿಕರಣಗಳಲ್ಲಿ ಪ್ರಶ್ನಿಸಲು ಅಂತಿಮ ಪಟ್ಟಿ ಅಧಿಸೂಚಿತಗೊಳ್ಳುವುದನ್ನು ಈ ಜನರು ಆತಂಕದಿಂದ ಕಾಯುತ್ತಿದ್ದಾರೆ.

ಹೋಜಾಯಿ ಜಿಲ್ಲೆಯ ಸಣ್ಣ ವ್ಯಾಪಾರಿ ಮುಹಮ್ಮದ್ ಫಕ್ರುದ್ದೀನ್ ಖಾನ್(41) ಈ ಲಕ್ಷಾಂತರ ಜನರ ಪೈಕಿ ಒಬ್ಬರಾಗಿದ್ದಾರೆ. ಪೌರತ್ವ ಪಟ್ಟಿಯಿಂದ ಅತ್ಯಂತ ಹೆಚ್ಚಿನ ಜನರು ಹೊರಗಿರಿಸಲ್ಪಟ್ಟಿರುವ ಜಿಲ್ಲೆಗಳಲ್ಲಿ ಹೋಜಾಯಿ ಸೇರಿದೆ. ಭೂ ದಾಖಲೆಗಳು,ಹಿಂದಿನ ಮತದಾರರ ಪಟ್ಟಿಗಳು ಇತ್ಯಾದಿ ದಾಖಲೆಗಳನ್ನು ಜತನವಾಗಿ ಇಟ್ಟುಕೊಂಡಿರುವ ಖಾನ್, “ಮೇಲ್ಮನವಿಗಳನ್ನು ಸಲ್ಲಿಸಲು ವ್ಯವಸ್ಥೆ ಇನ್ನೂ ಆರಂಭಗೊಂಡಿಲ್ಲ. ಅಂತಿಮ ಪಟ್ಟಿಯಿಂದ ನಮ್ಮನ್ನು ಹೊರಗಿರಿಸಲು ಕಾರಣಗಳೂ ನಮಗೆ ಗೊತ್ತಿಲ್ಲ. ನಾವು ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ, ಆದರೆ ಈ ದಾಖಲೆಗಳು ನಡೆಯುತ್ತವೆಯೋ ಇಲ್ಲವೋ ಎಂಬ ಕಳವಳ ಮತ್ತು ಗೊಂದಲದಲ್ಲಿದ್ದೇವೆ” ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ನತದೃಷ್ಟರ ಆತಂಕ ಮತ್ತು ಅನಿಶ್ಚಿತತೆ ಮಾತ್ರವಲ್ಲ, ಖರ್ಚುಗಳೂ ಹೆಚ್ಚುತ್ತಿವೆ.

ಪಟ್ಟಿಯಿಂದ ಹೊರಗಿರುವವರ ಪೈಕಿ ಹೆಚ್ಚಿನವರು ಬಡವರು. ಅವರು ಚಿಂತೆಗೀಡಾಗಿದ್ದಾರೆ,ಏನು ಮಾಡಬೇಕು ಎನ್ನುವುದೂ ಅವರಿಗೆ ಗೊತ್ತಾಗುತ್ತಿಲ್ಲ. ದಾಖಲೆಗಳ ಒಂದು ಪ್ರಮಾಣೀಕೃತ ಪ್ರತಿಗಾಗಿ ವಕೀಲರು 500 ರೂ.ನಿಂದ 1,000 ರೂ.ವರೆಗೂ ಪೀಕುತ್ತಿದ್ದಾರೆ ಎಂದು ಅಖಿಲ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಯೂನಿಯನ್ ನಾಯಕ ಮುನವ್ವರ್ ಹುಸೈನ್ ಹೇಳಿದರು.

2019, ಆ.31ರಂದು ಪ್ರಕಟಗೊಂಡ ಅಸ್ಸಾಂ ಎನ್‌ಆರ್‌ಸಿಯ ಅಂತಿಮ ಪಟ್ಟಿಯಿಂದ 19 ಲ.ಕ್ಕೂ ಅಧಿಕ ಜನರು ಹೊರಗಿಳಿದಿದ್ದಾರೆ. ಪಟ್ಟಿಯಿಂದ ಭಾರೀ ಸಂಖ್ಯೆಯಲ್ಲಿ ಹಿಂದುಗಳನ್ನು ಕೈಬಿಡಲಾಗಿರುವುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ಎನ್‌ಆರ್‌ಸಿಯನ್ನು ರದ್ದುಗೊಳಿಸುವಂತೆ ಅಥವಾ ಮರುದೃಢೀಕರಿಸುವಂತೆ ಆಗ್ರಹಿಸಿದೆ. ಆದರೆ ಹೆಚ್ಚಿನ ಹಿಂದುಗಳಿಗೆ ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮರನ್ನು ಹೊರತುಪಡಿಸಿ ಇತರ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಿರುವ ಸಿಎಎ ರಕ್ಷಣೆಯನ್ನು ಒದಗಿಸಲಿದೆ.

ಈ ಮೊದಲು ಸ್ವೀಕೃತವಾಗಿರದ ದಾಖಲೆಗಳು ಈಗ ಸ್ವೀಕೃತವಾಗುತ್ತವೆಯೇ ಎನ್ನುವುದು ಪಟ್ಟಿಯಿಂದ ಹೊರಗಿರುವವರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ.

ಭೂ ದಾಖಲೆಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ಮಾಧ್ಯಮಗಳು ಈಗ ವರದಿ ಮಾಡುತ್ತಿವೆ. ಅದರ ಪರಿಹಾರ ಮಾರ್ಗವೊಂದಿದೆ. 1971ರ ಮೊದಲಿನ ಭೂ ದಾಖಲೆಗಳಿದ್ದರೆ ಅವುಗಳ ಅಧಿಕೃತತೆಯನ್ನು ಸಿದ್ಧಪಡಿಸಬೇಕು. ಭೂ ದಾಖಲೆಗಳು 197 1ರ ನಂತರದ್ದಾಗಿದ್ದರೆ ಅವುಗಳಿಗೆ ಹೆತ್ತವರೊಂದಿಗಿನ ನಂಟನ್ನು ಸಾಬೀತುಗೊಳಿಸಬೇಕಾಗುತ್ತದೆ ಎಂದು ಗುವಾಹಟಿ ಹೈಕೋರ್ಟ್‌ನ ಹಿರಿಯ ವಕೀಲ ಸೈಯದ್ ಬುಹಾನುರ್ರಹ್ಮಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News