‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ: ಅಮೂಲ್ಯ ಲಿಯೋನ ಪೊಲೀಸ್ ವಶಕ್ಕೆ

Update: 2020-02-20 17:44 GMT

ಬೆಂಗಳೂರು, ಫೆ.20: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನ(19) ಅನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದರು.

ಗುರುವಾರ ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಈಸಾಯಿ ಫೆಡರೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಷಣ ಆರಂಭಕ್ಕೂ ಮುನ್ನಾ ಅಮೂಲ್ಯ ಲಿಯೋನ್, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

ನೆರೆದಿದ್ದ ಸಹಸ್ರಾರು ಜನರು, ಒಂದು ಕ್ಷಣ ಮೌನಕ್ಕೆ ಶರಣಾದರೂ, ಅಮೂಲ್ಯ ಮೂರು ಬಾರಿ ಘೋಷಣೆ ಕೂಗಿದರು. ಈ ವೇಳೆ, ಮಧ್ಯಪ್ರವೇಶಿಸಿದ ಆಯೋಜಕರು ಮೈಕ್ ಕಸಿದುಕೊಳ್ಳುತ್ತಿದ್ದಂತೆಯೇ, ವೇದಿಕೆ ಬಳಿಯಿದ್ದ ಪೊಲೀಸರು ಆಕೆಯನ್ನು ತಡೆದರು. ಕೂಡಲೇ ಉಪ್ಪಾರಪೇಟೆ ಠಾಣೆಯ ಮಹಿಳಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಕರೆದೊಯ್ದರು.

ತಡೆದ ಉವೈಸಿ: ವೇದಿಕೆ ಮೇಲೆಯೇ ನಮಾಝ್ ಮಾಡಲು ಎಐಎಂಐಎಂ ಅಧ್ಯಕ್ಷ, ಸಂಸದ ಅಸದುದ್ದೀನ್ ಉವೈಸಿ ತೆರಳುತ್ತಿದ್ದರು. ಈ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರತಿಧ್ವನಿಸುತ್ತಿದ್ದಂತೆಯೇ, ನೇರವಾಗಿ ಆಕೆ ಬಳಿ ಬಂದ ಉವೈಸಿ, ಮೈಕ್ ಕಸಿದು, ಇದನ್ನು ನಾನು ಬೆಂಬಲಿಸುವುದಿಲ್ಲ ಎಂದರು.

ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದಡಿ ಅಮೂಲ್ಯ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ) ಸೇರಿ ವಿವಿಧ ಕಾಯ್ದೆ ಅಡಿ ಎಫ್ ಐಆರ್ ದಾಖಲಿಸಲಾಗಿದೆ.

ಯುವತಿ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿರುವುದು ಸ್ಪಷ್ಟವಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಅವುಗಳನ್ನು ಪ್ರಕರಣದ ತನಿಖೆಗೆ ಸಾಕ್ಷ್ಯವಾಗಿ ಪರಿಗಣಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾವೇಶದ ಆಯೋಜಕರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದವರಿಂದ ಹೇಳಿಕೆ ಪಡೆಯಲಾಗುವುದು.
- ರಮೇಶ್ ಬಾನೋತ್, ಪಶ್ಚಿಮ ವಿಭಾಗದ ಡಿಸಿಪಿ 

"ಕಠಿಣ ಕ್ರಮ ಕೈಗೊಳ್ಳಲಾಗುವುದು"
ಪಾಕಿಸ್ತಾನ್ ಪರ ಯುವತಿ ಘೋಷಣೆ ಕೂಗಿದ ಪ್ರಕರಣ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಇಂತಹ ಹೇಳಿಕೆಗಳಿಂದ ಮನಸ್ಸಿಗೆ ನೋವುಂಟಾಗುತ್ತದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಇಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಅಮೂಲ್ಯ ಅವರನ್ನು ನಾವು ಆಹ್ವಾನಿಸಿಲ್ಲ. ಉದ್ದೇಶಪೂರ್ವಕವಾಗಿ ಅವರು ಇಂತಹ ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಿದ್ದಾರೆ. ಆಕೆ ಮೇಲೆ ದೂರು ದಾಖಲಿಸಿ ತನಿಖೆ ನಡೆಸಲಿ.
-ಇಮ್ರಾನ್ ಪಾಷಾ, ಕಾರ್ಯಕ್ರಮ ಆಯೋಜಕ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News