×
Ad

​‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ: ಅಮೂಲ್ಯಾಗೆ 14 ದಿನಗಳ ನ್ಯಾಯಾಂಗ ಬಂಧನ

Update: 2020-02-21 09:59 IST

ಬೆಂಗಳೂರು, ಫೆ.21: ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮೂಲ್ಯಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಸದ್ಯ ಅಮೂಲ್ಯ ಲಿಯೋನಾಳನ್ನು ನಗರದ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿಡಲಾಗಿದೆ. ಗುರುವಾರ ರಾತ್ರಿ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸರು ಅಮೂಲ್ಯರನ್ನು ವಿಚಾರಣೆ ನಡೆಸಿದ ಬಳಿಕ 5ನೆ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಶಿರಿನ್ ಜಿ.ಅನ್ಸಾರಿ ಅವರ ಕೋರಮಂಗಲದ ನಿವಾಸಕ್ಕೆ ಕರೆದೊಯ್ಯಲಾಯಿತು.

ಅಮೂಲ್ಯರನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರ ಪರ ವಕೀಲರು ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು. ನ್ಯಾಯಾಧೀಶರು 14 ದಿನಗಳ ಕಾಲ ಮಾತ್ರ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದರು.

ಅಮೂಲ್ಯಗೆ ಪಾಕಿಸ್ತಾನದ ಪರ ಘೋಷಣೆ ಕೂಗಲು ಯಾರಾದರೂ ಕುಮ್ಮಕ್ಕು ನೀಡಿದ್ದಾರಾ? ಆಯೋಜಕರು ಇವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರಾ? ಇಲ್ಲವೆ ಇವರೆ ವೇದಿಕೆ ಮೇಲೆ ಬಂದು ಪಾಕ್ ಪರ ಘೋಷಣೆ ಕೂಗಿದರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಉಪ್ಪಾರಪೇಟೆ ಪೊಲೀಸರು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ. ಅಮೂಲ್ಯ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124ಎ, 153 ಎ ಮತ್ತು 153 ಬಿ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ಫ್ರೀಂಡಂ ಪಾರ್ಕ್‌ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರೆಂಟ್ ಆಯೋಜಿಸಿದ್ದ ಕಾರ್ಯಕ್ರಮದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಣ ಮಾಡಲಾಗಿದೆ. ಇದನ್ನು ಪರಿಶೀಲಿಸಿ ಅಮೂಲ್ಯ ಲಿಯೋನಾಗೆ ಪಾಕಿಸ್ತಾನ ಪರ ಘೋಷಣೆ ಕೂಗಲು ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೂಲ್ಯಾಳ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಗ್ರಾಮದ ವಾಜಿಯಲ್ಲಿ ಆಕೆಯ ಮನೆಗೆ ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಮೂಲ್ಯಾಳ ದೇಶವಿರೋಧಿ ಘೋಷಣೆಯಿಂದ ಆಕ್ರೋಶಗೊಂಡ ಜನರು ಮನೆಯ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಮನೆಯ ಮುಂಭಾಗ ಹಾಗೂ ಹಿಂಭಾಗದ ಕಿಟಕಿ ಗಾಜುಗಳಿಗೆ ಕಲ್ಲು ತೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮವಾಗಿ ಮನೆಯ ಸುತ್ತಲೂ ಪೊಲೀಸ್ ಕಾವಲು ನಿಯೋಜನೆ ಮಾಡಲಾಗಿದೆ. ಈ ನಡುವೆ ಅಮೂಲ್ಯಾ ತಂದೆ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News