ಆಕ್ಷೇಪಾರ್ಹ ಭಿತ್ತಿಪತ್ರ ಪ್ರದರ್ಶನ: ಬೆಂಗಳೂರಿನಲ್ಲಿ ಮತ್ತೋರ್ವ ಯುವತಿಯ ಬಂಧನ

Update: 2020-02-21 17:13 GMT

ಬೆಂಗಳೂರು, ಫೆ. 21: ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ ಯುವತಿ ಅಮೂಲ್ಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೆ ಮತ್ತೊಬ್ಬಳು ಯುವತಿ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಇಲ್ಲಿನ ಪುರಭವನದ ಮುಂಭಾಗದಲ್ಲಿ ಶ್ರೀರಾಮಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಯುವತಿ ಅಮೂಲ್ಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಮಲ್ಲೇಶ್ವರಂ ಮೂಲದ ಯುವತಿ ಆರ್ದ್ರಾ ಎಂಬವರು ಏಕಾಏಕಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.

‘ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್, ಆದಿವಾಸಿ, ಮುಕ್ತಿ, ಮುಕ್ತಿ, ಮುಕ್ತಿ ಈ ಕೂಡಲೇ’ ಎಂಬ ಭಿತ್ತಿ ಪತ್ರವನ್ನು ಪ್ರದರ್ಶಿಸಿದ್ದಾಳೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಕೂಡಲೇ ಆಕೆಯನ್ನು ವಶಕ್ಕೆ ಪಡೆದಿದ್ದು, ಸಮೀಪದಲ್ಲೇ ಇರುವ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇದೇ ವೇಳೆ ಶ್ರೀರಾಮಸೇನೆ ಸೇರಿದಂತೆ ಸ್ಥಳದಲ್ಲಿದ್ದ ಮುಖಂಡರು ಯುವತಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಆಕೆಯನ್ನು ಪೊಲೀಸರು ನಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಕಠಿಣ ಕ್ರಮ ಕೈಗೊಳ್ಳಿ: ಅಮೂಲ್ಯ ವಿರುದ್ಧದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಯುವತಿ, ಫ್ರೀ ಕಾಶ್ಮೀರ, ಮುಸ್ಲಿಂ ಮುಕ್ತಿ, ಕಾಶ್ಮೀರಿ ಮುಕ್ತಿ, ದಲಿತ ಮುಕ್ತಿ, ಫಲಕ ಹಿಡಿದು ಬಂದಿದ್ದು, ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆಕೆ ವಿರುದ್ಧವು ಗಂಭೀರ ಪ್ರಕರಣ ದಾಖಲಿಸಬೇಕೆಂದು ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ಹರೀಶ್ ಆಗ್ರಹಿಸಿದ್ದಾರೆ.

ಮೊಕದ್ದಮೆ ದಾಖಲು: ‘ಪುರಭವನ ಮುಂಭಾಗದಲ್ಲಿ ಶ್ರೀರಾಮಸೇನೆ ಸೇರಿ ವಿವಿಧ ಸಂಘಟನೆಗಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಪರಿಚಿತ ಯುವತಿ ಏಕಾಏಕಿ ಅಲ್ಲಿಗೆ ಧಾವಿಸಿ ಭಿತ್ತಿಪತ್ರ ಪ್ರದರ್ಶಿಸಿದ್ದಾರೆ. ಆದರೆ, ಯಾವುದೇ ಘೋಷಣೆ ಕೂಗಿಲ್ಲ. ಆಕೆಯ ಪೂರ್ವಾಪರ ಸಂಗ್ರಹಿಸಲಾಗುತ್ತಿದೆ. ಅಲ್ಲದೆ, ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’

-ಚೇತನ್ ಸಿಂಗ್ ರಾಥೋಡ್, ಕೇಂದ್ರ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News