ಹೋರಾಟದಿಂದ ಯಾವ ಭಾಷೆಯೂ ಉದ್ಧಾರವಾಗಲ್ಲ: ಹಿರಿಯ ಕತೆಗಾರ ಎಸ್.ದಿವಾಕರ್

Update: 2020-02-21 15:19 GMT

ಬೆಂಗಳೂರು, ಫೆ.21: ಯಾವ ಹೋರಾಟದಿಂದಲೂ ಯಾವ ಭಾಷೆಯು ಉದ್ಧಾರ ಆಗಲ್ಲ. ಬದಲಿಗೆ, ಪರಕೀಯ ಭಾಷೆಗಳನ್ನು ದ್ವೇಷಿಸಲು ಎಡೆ ಮಾಡಿಕೊಡುತ್ತದೆ ಎಂದು ಹಿರಿಯ ಕತೆಗಾರ ಎಸ್.ದಿವಾಕರ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಕೇಂದ್ರ ಸಾಹಿತ್ಯ ಅಕಾಡೆಮಿ ನಗರದಲ್ಲಿ ಆಯೋಜಿಸಿದ್ದ ತಾಯಿ ಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಗುಬ್ಬಿವೀರಣ್ಣ ನಾಟಕ ಕಂಪೆನಿಯು ಚೆನ್ನೈನಲ್ಲಿ ನಾಟಕ ಪ್ರದರ್ಶನ ಮಾಡಿದರೆ, ಸದಾ ಹೌಸ್‌ಪುಲ್ ಆಗುತ್ತಿತ್ತು. ಆದರೆ, ಈಗ ಅಲ್ಲಿಯ ಯಾವ ಮಲ್ಟಿಪ್ಲೆಕ್ಸ್‌ಗಳಲ್ಲೂ ಕನ್ನಡದ ಒಂದು ಸಿನೆಮಾ ಒಂದು ಗಳಿಗೆಯೂ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಭಾಷೆ ಹಾಗೂ ಕಾವ್ಯಕ್ಕೆ ಹತ್ತಿರದ ಸಂಬಂಧವಿರುತ್ತದೆ. ಅಭಿವ್ಯಕ್ತಿಯ ತೀವ್ರರೂಪವನ್ನು ಕಾವ್ಯದಲ್ಲಿ ಮಾತ್ರ ಕಾಣಲು ಸಾಧ್ಯ. ಮಾತೃ ಭಾಷೆಯಲ್ಲಿ ಬರೆದ ಕಾವ್ಯಗಳು ಮಾತ್ರ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತವೆ. ಹೃದಯವಂತರು ಮಾತ್ರ ಕಾವ್ಯದ ದಾರಿಯಲ್ಲಿ ಹೋಗಲು ಸಾಧ್ಯವೆಂದು ಅವರು ಹೇಳಿದರು.

ಸಂಗೀತದಂತೆ ಕಾವ್ಯಕ್ಕೂ ಸೌಂದರ್ಯವಿರುತ್ತದೆ. ಕಾವ್ಯದಲ್ಲಿ ಬರುವ ಎಲ್ಲ ಸಾಲುಗಳು, ಪದಗಳು ಅರ್ಥ ಆಗಬೇಕಾಗಿಲ್ಲ. ಕಾವ್ಯದ ಲಯವನ್ನು ಆಲಿಸಿದರೆ ಸಾಕು ಅದು ನಮ್ಮ ಹೃದಯವನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಕಾವ್ಯಕ್ಕೆ ಭಾಷೆ, ಪ್ರದೇಶದ ಹಂಗಿಲ್ಲವೆಂದು ಅವರು ಹೇಳಿದರು.

ಉರ್ದು ಅನುವಾದಕ ಮಾಹೆರ್ ಮನ್ಸೂರ್ ಮಾತನಾಡಿ, ಉರ್ದು ಕೇವಲ ಮುಸ್ಲಿಮರ ಭಾಷೆ ಎಂಬ ತಪ್ಪು ಕಲ್ಪನೆಗಳಿವೆ. ಉರ್ದುವಿನ ಮೇಲೆ ಅರೇಬಿಯಾ, ಪರ್ಷಿಯನ್ ಭಾಷೆಗಳಿಗಿಂತ ಭಾರತದಲ್ಲಿರುವ ಇತರೆ ಭಾಷೆಗಳ ಪ್ರಭಾವ ಹೆಚ್ಚಾಗಿ ಸ್ವತಂತ್ರ ಭಾಷೆಯಾಗಿ ಬೆಳೆದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನುವಾದಕರಾದ ಮಲಯಾಳಂನ ವಿಷ್ಣುಮಂಗಳಮ್, ತಮಿಳಿನ ಎನ್.ದಾಸ್, ತೆಲುಗಿನ ಮಾರ್ಕಂಡಪುರಂ ಶ್ರೀನಿವಾಸ್ ತಮ್ಮ ಭಾಷೆಯ ಹಿರಿಮೆ ಕುರಿತು ಮಾತನಾಡಿ, ಕಾವ್ಯ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News