ಬೆಂಗಳೂರು: ಪ್ರತ್ಯೇಕ ರಸ್ತೆ ಅಪಘಾತ; ಇಂಜಿನಿಯರ್ ಸೇರಿ ಮೂವರು ಮೃತ್ಯು

Update: 2020-02-21 15:21 GMT

ಬೆಂಗಳೂರು, ಫೆ.21: ನಗರದ ಕುಮಾರಸ್ವಾಮಿ ಲೇಔಟ್, ಪೀಣ್ಯ ಹಾಗೂ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಸಿವಿಲ್ ಇಂಜಿನಿಯರ್ ಸೇರಿ ಮೂವರು ಮೃತಪಟ್ಟಿದ್ದಾರೆ.

ಬೈಕ್‌ನಲ್ಲಿ ಹೋಗುತ್ತಿದ್ದ ಇಂಜಿನಿಯರ್ ಓರ್ವ ಮನೆಯೊಂದರ ಗೋಡೆಗೆ ಢಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಕೋಣನಕುಂಟೆಯ ಶ್ರೀನಿಧಿ ಲೇಔಟ್‌ನಲ್ಲಿ ನಡೆದಿದೆ. ಮೃತ ಕುಮಾರಸ್ವಾಮಿ ಲೇಔಟ್‌ನ ಸೋಮಶೇಖರ್(36) ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸೋಮಶೇಖರ್, ಗುರುವಾರ ಬೆಳಗ್ಗೆ ರಾತ್ರಿ ಪಾಳಯದ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಕೋಣನಕುಂಟೆಯ ಶ್ರೀನಿಧಿ ಲೇಔಟ್‌ನ ಮನೆಯೊಂದರ ಗೋಡೆಗೆ ಕತ್ತಲಲ್ಲಿ ಕಾಣದೆ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಸೌಮ್ಯಲತಾ ತಿಳಿಸಿದ್ದಾರೆ.

ತುಮಕೂರು-ಬೆಂಗಳೂರು ರಸ್ತೆಯ ನವಯುಗ ಟೋಲ್ ಸಮೀಪ ಅಪರಿಚಿತ ವಾಹನ ಹರಿದು ಅಡುಗೆ ಭಟ್ಟರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹೊಸದುರ್ಗದ ಅರೆಹಳ್ಳಿಯ ರವಿ (35) ಮೃತ ವ್ಯಕ್ತಿ. ನಗರದಲ್ಲಿ ಅಡುಗೆ ಕೆಲಸಗಳಿಗೆ ಹೋಗುತ್ತಿದ್ದ ಅವರು, ರಾತ್ರಿ 11:30ರ ವೇಳೆ ನವಯುಗ ಟೋಲ್‌ನ ಸಲ್ಲಾನಿ ಟ್ರಾನ್ಸ್‌ಪೋರ್ಟ್ ಮುಂಭಾಗ ಮಲಗಿದ್ದರು. ಈ ವೇಳೆ ಅವರ ಮೇಲೆ ಅಪರಿಚಿತ ವಾಹನ ಹರಿದು ಮೃತಪಟ್ಟಿದ್ದಾರೆ. ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಅಪಘಾತವೆಸಗಿದ ವಾಹನಕ್ಕಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಜಾಲಹಳ್ಳಿಯ ಎಸ್.ಎಂ ರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬೇಲೂರು ಮೂಲದ ಜಗನ್ನಾಥ್ (33) ಎಂದು ಗುರುತಿಸಲಾಗಿದೆ.

ಇಂದಿರಾನಗರದ ಖಾಸಗಿ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಜಗನ್ನಾಥ್ ರಾತ್ರಿ 12ರ ವೇಳೆ ಬೈಕನಲ್ಲಿ ಕೆಲಸ ಮುಗಿಸಿಕೊಂಡು ಎಸ್‌ಎಂ ರಸ್ತೆಯ ಅಯ್ಯಪ್ಪದೇವಸ್ಥಾನದ ಬಳಿ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಜಾಲಹಳ್ಳಿ ಸಂಚಾರಿ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News