ಕಲಾ ಪ್ರದರ್ಶನಕ್ಕೆ ಚಿತ್ರಕಲಾ ಪರಿಷತ್ ಉತ್ತಮ ವೇದಿಕೆ: ನಟಿ ಭವ್ಯಾ

Update: 2020-02-21 17:12 GMT

ಬೆಂಗಳೂರು, ಫೆ.21: ಕಲಾ ಶಿಕ್ಷಣ ಹಾಗೂ ಕಲೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಸ್ಥಾಪಿತವಾಗಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಹಿರಿಯ ಚಲನಚಿತ್ರ ನಟಿ ಭವ್ಯಾ ಹೇಳಿದ್ದಾರೆ.

ಶುಕ್ರವಾರ ನಗರದ ಚಿತ್ರಕಲಾ ಪರಿಷತ್‌ನ ಆವರಣದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ಆರ್ಟಿಸನ್ಸ್ ಬಝಾರ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಚಿತ್ರಕಲಾ ಪರಿಷತ್ ಕಲೆ, ಚಿತ್ರಕಲೆ ಹಾಗೂ ಕಲಾ ಪ್ರಕಾರಗಳಿಗೆ ಉತ್ತಮ ವೇದಿಕೆ ನೀಡುತ್ತಿದೆ. ಈ ವೇದಿಕೆಯನ್ನು ಕಲಾವಿದರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಕಲಾವಿದರ ಕೈಚಳಕದ ಕಲಾಕೃತಿಯನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಗ್ರಾಂಡ್ ಫ್ಲಿಯಾ ಮಾರ್ಕೆಟ್ ಹಾಗೂ ಚಿತ್ತಾರ ನೀಡುತ್ತಿದೆ. ಕರಕುಶಲ ವಸ್ತುಗಳಿಗಾಗಿಯೇ ಬಹಳಷ್ಟು ಪ್ರಸಿದ್ಧಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂತಹದೊಂದು ವಿಶಿಷ್ಟವಾದ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿ ಎಲ್ಲರ ಗಮನ ಸೆಳೆಯುವಂತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಆಯೋಜಕ ಅಫ್ತಾಬ್ ಮಾತನಾಡಿ, ಮುಂಬರುವ ಹಬ್ಬದ ಹಾಗೂ ಮದುವೆ ಸೀಸನ್‌ಗೆ ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‌ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಲಿದೆ ಎಂದರು.

ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಮಹಿಳೆಯರ ಆಭರಣಗಳು, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‌ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ. ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ಅನೇಕ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News