ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಮೊಟೆರಾ ಗುಜರಾತ್‌ನ ಮತ್ತೊಂದು ಬಿಳಿಯಾನೆ !

Update: 2020-02-21 18:53 GMT

ಹೊಸದಿಲ್ಲಿ, ಫೆ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತದಲ್ಲಿ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನ್ನು ಲೋಕಾರ್ಪಣೆ ಮಾಡಲಿದ್ದಾರೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತವರು ರಾಜ್ಯದಲ್ಲಿ ಮತ್ತೊಂದು ವ್ಯರ್ಥ ಯೋಜನೆ ರೂಪಿಸಿದ್ದಾರೆಯೇ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಕ್ರಿಕೆಟ್ ಕುರಿತು ಅಷ್ಟೇನೂ ತಿಳಿದುಕೊಂಡಿಲ್ಲದ ಟ್ರಂಪ್ ಅಹ್ಮದಾಬಾದ್‌ನಲ್ಲಿ 1,10,000 ಆಸನಗಳ ಸಾಮರ್ಥ್ಯದ ಸ್ಟೇಡಿಯಂನ್ನು ಸೋಮವಾರ ಉದ್ಘಾಟಿಸಲಿದ್ದಾರೆ. ಈ ಕಾರಣಕ್ಕೆ ಗುಜರಾತ್ ರಾಜ್ಯ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ.

 ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂ 1 ಲಕ್ಷ ಆಸನಗಳ ಸಾಮರ್ಥ್ಯವಿರುವ ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ(ಎಂಸಿಜಿ) ದಾಖಲೆಯನ್ನು ಮುರಿಯಲು ಸಜ್ಜಾಗಿದೆ. ಗುಜರಾತ್‌ನಲ್ಲಿ ಈ ಹಿಂದೆ ಸ್ವಾತಂತ್ರ ಹೋರಾಟಗಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಬೃಹತ್ ಗಾತ್ರದ ಪ್ರತಿಮೆಯನ್ನು ಉದ್ಘಾಟಿಸಲಾಗಿತ್ತು. 2018ರಲ್ಲಿ ಪೂರ್ಣಗೊಂಡಿರುವ ಪಟೇಲ್ ಪ್ರತಿಮೆ 182 ಮೀಟರ್(597 ಅಡಿ)ಎತ್ತರವಿದ್ದು, ಸ್ಟಾಚ್ಯು ಆಫ್ ಲಿಬರ್ಟಿಗಿಂತ ಎರಡು ಪಟ್ಟು ಎತ್ತರವಿದೆ.

ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ದೊಡ್ಡ ಸ್ಟೇಡಿಯಂ ನಿರ್ಮಿಸಬೇಕೆಂಬ ಕನಸು ಕಂಡಿದ್ದರು.

ಇದು ಅಮಿತ್ ಶಾ ಹಾಗೂ ಮೋದಿ ಜೀ ಅವರ ಕನಸಾಗಿತ್ತು. ಇನ್ನು ಮುಂದೆ ವಿಶ್ವ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ಎಲ್ಲ ದೊಡ್ಡ ಪಂದ್ಯಗಳನ್ನು ಬಿಸಿಸಿಐ ಇಲ್ಲಿಯೇ ಆಯೋಜಿಸುವ ವಿಶ್ವಾಸವಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದರು.

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ದೇಶದ 12ಕ್ಕೂ ಅಧಿಕ ಸ್ಟೇಡಿಯಂಗಳು ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಮರ್ಥವಾಗಿವೆ. ಐದು ದಿನಗಳ ಪಂದ್ಯ ಟೆಸ್ಟ್ ಕ್ರಿಕೆಟ್ ಜನರನ್ನು ಆಕರ್ಷಿಸಲು ವಿಫಲವಾಗುತ್ತಿದೆ. ಭಾರತದಲ್ಲಿ ಕ್ರೀಡಾ ಮೈದಾನವನ್ನು ಬೇರೆ ಸಮಯದಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಿಗೂ ಬಳಸಲಾಗುತ್ತದೆ. ಆದರೆ, ಮತ್ತೊಂದು ದೊಡ್ಡ ಸ್ಟೇಡಿಯಂನ ಅಗತ್ಯವಿತ್ತೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

   ‘‘ಸ್ಟೇಡಿಯಂ ನಿರ್ಮಿಸಲು ಬಳಸಲಾಗಿರುವ ಮೂಲ ಸೌಕರ್ಯವನ್ನು ನೋಡಿದರೆ ಇದೊಂದು ಬಿಳಿಯಾನೆ ಆಗುವ ಹಾಗೂ ಎಷ್ಟು ಸಾಧ್ಯವೋ ಅಷ್ಟು ಬಳಸಲು ಸಾಧ್ಯವಾಗದೇ ಇರಬಹುದು. ಸ್ಟೇಡಿಯಂಗೆ ಬರುವ ಗರಿಷ್ಠ ಪ್ರೇಕ್ಷಕರ ಸಂಖ್ಯೆ ಎಷ್ಟಿರಬಹುದು ಎಂಬ ಬಗ್ಗೆ ಅವರು ಕೆಲವು ಸಂಶೋಧನೆ ನಡೆಸಿರಬಹುದು. ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರಿಗೆ ಸ್ಥಳ ಸಾಕಷ್ಟಿದೆ ’’ ಎಂದು ಹಿರಿಯ ಕ್ರೀಡಾ ಲೇಖಕ ಅಯಾಝ್ ಮೆಮೊನ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯಗಳ ಕ್ರೀಡಾಂಗಣಗಳ ಆಯ್ಕೆಗೆ ಬಿಸಿಸಿಐ ಆವರ್ತನಾ ನಿಯಮವನ್ನು ಬಳಸುತ್ತಿರುವುದರಿಂದ ಮೊಟೆರಾ ಸ್ಟೇಡಿಯಂ ಕಡಿಮೆ ಬಳಕೆಯಾಗುವ ಸಾಧ್ಯತೆ ಇರುವಂತೆ ಕಾಣುತ್ತಿದೆ. ಇದೊಂದು ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾಗಿರುವ ಮತ್ತೊಂದು ಬಿಳಿಯಾನೆ ಆಗಿದೆ ಎಂದು ವಿಪಕ್ಷ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News