ಮೊದಲ ಟ್ವೆಂಟಿ-20: ಅಗರ್ ಹ್ಯಾಟ್ರಿಕ್, ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2020-02-22 07:25 GMT

ಜೋಹಾನ್ಸ್‌ಬರ್ಗ್, ಫೆ.22: ಎಡಗೈ ಸ್ಪಿನ್ನರ್ ಅಶ್ಟನ್ ಅಗರ್ ಅವರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಆಸ್ಟ್ರೇಲಿಯ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 107 ರನ್‌ಗಳ ಅಂತರದಿಂದ ಮಣಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಗೆಲುವಿನ ಮೂಲಕ ಆಸ್ಟ್ರೇಲಿಯ ಟ್ವೆಂಟಿ-20ಯಲ್ಲಿ ಗೆಲುವಿನ ಓಟವನ್ನು 9 ಪಂದ್ಯಗಳಿಗೆ ವಿಸ್ತರಿಸಿದೆ. 2018ರ ನವೆಂಬರ್‌ನಲ್ಲಿ ಕೊನೆಯ ಬಾರಿ ಸೋತಿದ್ದ ಆಸೀಸ್ 8ರಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ. ರವಿವಾರ ಪೋರ್ಟ್ ಎಲಿಝಬೆತ್‌ನಲ್ಲಿ 2ನೇ ಪಂದ್ಯವನ್ನು ಆಡಲಿದೆ. ಬುಧವಾರ ಕೇಪ್‌ಟೌನ್‌ನಲ್ಲಿ 3ನೇ ಹಾಗೂ ಕೊನೆಯ ಪಂದ್ಯ ನಿಗದಿಯಾಗಿದೆ.

ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 6 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿತು. 2018ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ ಬಳಿಕ ಆಸೀಸ್ ಪರ ಮೊದಲ ಬಾರಿ ಟ್ವೆಂಟಿ-20 ಪಂದ್ಯ ಆಡಿದ ಸ್ಟೀವನ್ ಸ್ಮಿತ್ ತಂಡದ ಪರ ಸರ್ವಾಧಿಕ ಸ್ಕೋರ್(45 ರನ್)ಗಳಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 52 ಎಸೆತಗಳಲ್ಲಿ 80 ರನ್ ಸೇರಿಸಿದ ಸ್ಮಿತ್ ಹಾಗೂ ಫಿಂಚ್(42)ಆಸ್ಟ್ರೇಲಿಯ ಉತ್ತಮ ಮೊತ್ತ ಗಳಿಸಲು ನೆರವಾದರು.

 ವೇಗಿದ್ವಯರಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ದಾಳಿಗೆ ಕಂಗಾಲಾದ ದಕ್ಷಿಣ ಆಫ್ರಿಕಾದ ರನ್ ಚೇಸಿಂಗ್ ವೇಳೆ ಕಳಪೆ ಆರಂಭ ಪಡೆಯಿತು. ಅಗರ್ ಸ್ಪಿನ್ ಮೋಡಿಗೆ ಸಿಲುಕಿ ಕೇವಲ 89 ರನ್‌ಗೆ ಆಲೌಟಾಯಿತು. ಈ ಮೂಲಕ ಟ್ವೆಂಟಿ-20ಯಲ್ಲಿ ಕನಿಷ್ಠ ಸ್ಕೋರ್ ಗಳಿಸಿತು. ಆತಿಥೇಯ ತಂಡವಾಗಿ ಟ್ವೆಂಟಿ-20ಯಲ್ಲಿ ಭಾರೀ ಅಂತರದ(107)ಸೋಲು ಕಂಡಿತು. ಜೀವನಶ್ರೇಷ್ಠ ಬೌಲಿಂಗ್ ಸಂಘಟಿಸಿದ ಸ್ಪಿನ್ ಬೌಲರ್ ಅಗರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಎಫ್‌ಡು ಪ್ಲೆಸಿಸ್, ಆ್ಯಂಡಿಲ್ ಫೆಹ್ಲುಕ್ವಾಯೊ ಹಾಗೂ ಡೇಲ್ ಸ್ಟೇಯ್ನಾರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದ ಅಗರ್ ಹ್ಯಾಟ್ರಿಕ್ ವಿಕೆಟ್ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News