ಫೆ.26ರಿಂದ 12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ

Update: 2020-02-22 14:35 GMT

ಬೆಂಗಳೂರು, ಫೆ.22: 12ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವ ಫೆ.26ರಿಂದ ಮಾ.4ರವರೆಗೆ ನಡೆಯಲಿದ್ದು, 60 ದೇಶಗಳ 225 ಚಿತ್ರಗಳು ನಗರದ ಒರಾಯನ್ ಮಾಲ್, ನವರಂಗ ಚಿತ್ರಮಂದಿರ ಸೇರದಂತೆ ವಿವಿಧ ಭಾಗಗಳಲ್ಲಿ ಪ್ರದರ್ಶನ ಕಾಣಲಿವೆ.

ಫೆ.26ರಂದು ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದು, ನಟ ಯಶ್, ಹಿರಿಯ ನಟಿ ಜಯಪ್ರದಾ, ಬಾಲಿವುಡ್ ನಿರ್ಮಾಪಕ ಬೋನಿಕಪೂರ್, ಹಿನ್ನೆಲೆ ಗಾಯಕ ಸೋನುನಿಗಮ್ ಪಾಲ್ಗೊಳ್ಳಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಸಿದ್ದರಾಮಪ್ಪತಿಳಿಸಿದ್ದಾರೆ.

ನಗರದ ವಾರ್ತಾ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ’ ವಿಷಯವು ಈ ಬಾರಿಯ ಚಿತ್ರೋತ್ಸವದ ಮುಖ್ಯವಸ್ತುವಾಗಿದೆ. ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಇರಾನಿನ ಶಾಹಿದ್ ಅಹಮಡೇಲು ನಿರ್ದೇಶನದ ‘ಸಿನಿಮಾ ಖಾರು’ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ, ಮುಕ್ತಾಯ ಸಮಾರಂಭ ಮಾ. 4 ರಂದು ವಿಧಾನಸೌಧದಲ್ಲಿ ನಡೆಯಲಿದ್ದು, ಏಷ್ಯಾ, ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಲನಚಿತ್ರಗಳಿಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಕ್ತಾಯದ ಚಲನಚಿತ್ರವಾಗಿ ಇಸ್ರೇಲ್‌ನ ಇವೆಗಿನಿ ರುಮಾನ್ ನಿರ್ದೇಶನದ ಗೋಲ್ಡನ್ ಚಾಯ್ಸಸ್ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಿದರು. ಫೆ.27 ರಿಂದ ಒರಾಯನ್ ಮಾಲ್‌ನ 11 ಪರದೆಗಳು, ನವರಂಗ್ ಚಿತ್ರಮಂದಿರ, ಡಾ.ರಾಜ್ ಭವನ, ಸುಚಿತ್ರ ಫಿಲಂ ಸೊಸೈಟಿಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಎಷ್ಯನ್ ಸ್ಪರ್ಧಾ ವಿಭಾಗ, ಭಾರತೀಯ ಚಿತ್ರಗಳ ವಿಭಾಗ, ಕನ್ನಡ ಸ್ಪರ್ಧಾ ವಿಭಾಗ, ಕನ್ನಡ ಜನಪ್ರಿಯ ಮನರಂಜನಾ ಚಿತ್ರ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಪುನರಾವಲೋಕನ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಅವರು ಹೇಳಿದರು. ಆತ್ಮಚರಿತ್ರೆ ಆಧರಿಸಿದ ಬಯೋಪಿಕ್‌ಗಳು ಈ ಸಲದ ಚಿತ್ರೋತ್ಸವದ ವಿಶೇಷವಾಗಿದ್ದು, ರಷ್ಯಾದ ನಿರ್ದೇಶಕ ಆಂದ್ರೆ ತಾರ್ಕೋವೆಸ್ಕಿ, ಗಾಯಕಿ ಹೆಲನ್ ರೆಡ್ಡಿ, ಎಸ್. ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ, ಡಾ.ರಾಜೀವ್ ತಾರನಾಥ್, ಲಲಿತಾರಾವ್ ಹಾಗೂ ಛಾಯಾಗ್ರಾಹಕ ವಿ.ಕೆ. ಮೂರ್ತಿಯವರ ಸಾಕ್ಷಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಹೇಳಿದರು.

ಸಮಕಾಲೀನ ವಿಶ್ವ ಸಿನಿಮಾಗಳು ಹಾಗೂ ವಿದೇಶ ಕೇಂದ್ರಿತ ವಿಭಾಗದಲ್ಲಿ ಜರ್ಮನಿ, ಆಸ್ಟ್ರೇಲಿಯಾ, ಫಿಲಿಫೈನ್ಸ್ ಚಿತ್ರಗಳು, ರಷ್ಯಾದ ನಿರ್ದೇಶಕ ಆಂದ್ರೆ ತಾರ್ಕೋವ್‌ಸ್ಕಿ, ಬಹುಭಾಷಾ ನಟ ಅನಂತ್‌ ನಾಗ್ ಚಿತ್ರಗಳು ವಿಶೇಷವಾಗಿ ಪ್ರದರ್ಶನ ಕಾಣಲಿವೆ. ಜತೆಗೆ ಬರ್ಲಿನ್, ಕಾನ್, ವೆನಿಸ್, ಟೊರೆಂಟೊ, ಗೋವಾ, ಮುಂಬೈ ಮತ್ತು ಕೇರಳ ಅಂತರ್‌ರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡ ವಿಶ್ವ ಸಿನಿಮಾಗಳು ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿವೆ ಎಂದು ಅವರು ತಿಳಿಸಿದರು.

ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ, ತೆಲಂಗಾಣ, ಕೇರಳ ಹಾಗೂ ತಮಿಳುನಾಡುಗಳಿಂದ ಚಲನಚಿತ್ರ ನಿರ್ಮಾಪಕರು, ಚಲನಚಿತ್ರ ಉತ್ಸವ ಸಂಘಟಕರು, ಪತ್ರಕರ್ತರು, ಸಿನಿಮಾ ವಿಮರ್ಶಕರು ಪ್ರತಿನಿಧಿಗಳಾಗಿ ಆಗಮಿಸುತ್ತಿದ್ದಾರೆ. ಜತೆಗೆ ವಿದೇಶಗಳಿಂದ ಸಿನಿಮಾ ನಿರ್ದೇಶಕರು, ತಂತ್ರಜ್ಞರು ಆಗಮಿಸುತ್ತಿದ್ದಾರೆಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಅಕಾಡೆಮಿಯ ರಿಜಿಸ್ಟ್ರಾರ್ ಉಪಸ್ಥಿತರಿದ್ದರು.

ಬುಕ್ ಮೈ ಶೋ ಜಾಲತಾಣದ ಮೂಲಕ ಪ್ರತಿನಿಧಿಗಳ ನೋಂದಣಿ ಫೆ.24ರವರೆಗೆ ಇರುತ್ತದೆ. ಫೆ.26ರವರೆಗೆ ನಂದಿನಿ ಲೇಔಟ್‌ನಲ್ಲಿರುವ ಚಲನಚಿತ್ರೋತ್ಸವದ ಕಚೇರಿ, ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ, ವರ್ತುಲ ರಸ್ತೆ, ನಂದಿನಿ ಬಡಾವಣೆ ಬೆಂಗಳೂರು ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ 800ರೂ. ವಿದ್ಯಾರ್ಥಿಗಳಿಗೆ ಹಾಗೂ ಫಿಲಂ ಸೊಸೈಟಿ ಸದಸ್ಯರಿಗೆ ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿ ಸದಸ್ಯರಿಗೆ 400ರೂ.ಆಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News