ಬೆಂಗಳೂರು ವಿಮಾನ ನಿಲ್ದಾಣದಲ್ಲಿ 5.05 ಕೋಟಿ ರೂ. ಮೌಲ್ಯದ ಎಫಿಡ್ರಿನ್ ಜಪ್ತಿ

Update: 2020-02-22 14:22 GMT

ಬೆಂಗಳೂರು, ಫೆ.22: ನಿಷೇಧಿತ ಮಾದಕ ವಸ್ತು ಎಫಿಡ್ರಿನ್ ಸಾಗಾಟ ಸಂಬಂಧ ಕಾರ್ಯಾಚರಣೆ ನಡೆಸಿರುವ ಇಲ್ಲಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕಸ್ಟಮ್ಸ್ ತನಿಖಾಧಿಕಾರಿಗಳು, ಸುಮಾರು 5.05 ಕೋಟಿ ರೂ. ಮೌಲ್ಯದ ಮಾದಕ ವಸ್ತು ಎಫಿಡ್ರಿನ್ ಜಪ್ತಿ ಮಾಡಿದ್ದಾರೆ.

ಇತ್ತಿಚಿಗಷ್ಟೇ 5 ಕೋಟಿ ರೂ. ಮೌಲ್ಯದ ಎಫಿಡ್ರಿನ್ ಜಪ್ತಿ ಮಾಡಿದ್ದ ಅಧಿಕಾರಿಗಳು, ಇಂದು ತನಿಖೆ ಮುಂದುವರೆಸಿ ಮತ್ತೊಂದು ಬೃಹತ್ ಮಾದಕ ವಸ್ತು ಜಾಲವನ್ನು ಬೇಧಿಸಿದ್ದಾರೆ. ಕಾರ್ಗೋ ಮೂಲಕ ಬಂದ ಸರಕು ತಪಾಸಣೆ ವೇಳೆ ಆಮಂತ್ರಣ ಪತ್ರಿಕೆಗಳ ಜೊತೆ ಇದ್ದ ಪೌಚ್‌ನಲ್ಲಿ ಮಾದಕ ವಸ್ತು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟು 43 ಆಮಂತ್ರಣ ಪತ್ರಿಕೆಗಳು ಮತ್ತು ಬಟ್ಟೆಬರೆಗಳಿದ್ದ ಸರಕಿನಲ್ಲಿ ಮಾದಕ ವಸ್ತು ಸಾಗಣೆ ಪತ್ತೆಯಾಗಿದೆ. ಆಮಂತ್ರಣ ಪತ್ರಿಕೆಗಳ ಬದಿಗಳಿಗೆ ಅಳವಡಿಸಿದ್ದ 86 ಪಾಲಿಥಿನ್ ಪದರಗಳ ಒಳಗೆ ಬಿಳಿ ಪೌಡರ್ ತುಂಬಿಸಲಾಗಿತ್ತು. ಈ ಪೌಡರ್ ಪರಿಶೀಲನೆಗೆ ಒಳಪಡಿಸಿದಾಗ ಮಾದಕ ವಸ್ತು ಎನ್ನುವುದು ಗೊತ್ತಾಗಿದೆ.

ನೋವು ನಿವಾರಕ ಸೇರಿ ನಾನಾ ರೀತಿಯ ಔಷಧಿಗಳ ತಯಾರಿಕೆಗೆ ಬಳಸುವ ಎಫಿಡ್ರಿನ್ ಸಾಗಣೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಉದ್ದೇಶ ಹೊರತುಪಡಿಸಿ ಇತರ ಉದ್ದೇಶಗಳಿಗೆ ಇವುಗಳನ್ನು ಬಳಸಿದರೆ ಅದು 1985ರ ಮಾದಕ ವಸ್ತು ನಿಷೇಧಿತ ಕಾಯ್ದೆ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದೇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News