ಎನ್‌ಆರ್‌ಸಿ ಸಂತ್ರಸ್ತರಿಗೆ ಕಾನೂನು ನೆರವು ನೀಡಲು ಮುಸ್ಲಿಮ್ ಲೀಗ್ 'ರಾಷ್ಟ್ರೀಯ ಲಾ ಫೋರಂ' ಅಸ್ತಿತ್ವಕ್ಕೆ

Update: 2020-02-22 14:44 GMT

ಬೆಂಗಳೂರು, ಫೆ.22: ಅಸ್ಸಾಂನಲ್ಲಿ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ ಹೊರಗೆ ಉಳಿದಿರುವ ನೈಜ ಭಾರತೀಯರಿಗೆ ಕಾನೂನು ನೆರವು ನೀಡಲು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್(ಐಯುಎಂಎಲ್) ರಾಷ್ಟ್ರೀಯ ಲಾ ಫೋರಂ ಅಸ್ತಿತ್ವಕ್ಕೆ ತಂದಿದೆ ಎಂದು ಐಯುಎಂಎಲ್ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಖಾದರ್ ಮೊಹಿದ್ದೀನ್ ತಿಳಿಸಿದರು.

ಶನಿವಾರ ನಗರದಲ್ಲಿ ನಡೆದ ಐಯುಎಂಎಲ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ, ದಿಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ರಾಜ್ಯಗಳ ಒಂಭತ್ತು ಮಂದಿ ಪ್ರಮುಖ ವಕೀಲರ ನೇತೃತ್ವದಲ್ಲಿ ರಾಷ್ಟ್ರೀಯ ಲಾ ಫೋರಂ ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಐಯುಎಂಎಲ್ ಪಕ್ಷ ಸಂಘಟನೆ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೊಳಿಸಿದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳು, ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಮುಂದುವರೆಸಲು ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಸಿಎಎ ಜಾರಿಯಾದ ನಂತರ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಉತ್ತರ ಪ್ರದೇಶದಲ್ಲಿ 23 ಹಾಗೂ ಕರ್ನಾಟಕದಲ್ಲಿ ಇಬ್ಬರು ಅಮಾಯಕರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಮುಸ್ಲೀಮ್ ಲೀಗ್ ವತಿಯಿಂದ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಒಂದು ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಖಾದರ್ ಮೊಹಿದ್ದೀನ್ ತಿಳಿಸಿದರು.

ಐಯುಎಂಎಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಞಾಲಿ ಕುಟ್ಟಿ ಮಾತನಾಡಿ, ಉತ್ತರಪ್ರದೇಶ ಹಾಗೂ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಗೋಲಿಬಾರ್‌ಗೆ 25 ಜನ ಮೃತಪಟ್ಟಿರುವುದು ದುರದೃಷ್ಟಕರ. ಸಿಎಎ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಕಾಯ್ದೆಯಾಗಿದ್ದು, ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನು ಇದನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ದೇಶಕ್ಕೆ ಎನ್‌ಪಿಆರ್, ಎನ್‌ಆರ್‌ಸಿ ಹಾಗೂ ಸಿಎಎ ಅಗತ್ಯವಿಲ್ಲ. ಎನ್‌ಆರ್‌ಸಿ ಬೇಕು ಎಂದು ಯಾರು ಮೋದಿ ಸರಕಾರಕ್ಕೆ ಕೇಳಿದ್ದರು? ದೇಶದ ಜನತೆಯ ಮೇಲೆ ಮೋದಿಗೆ ಭರವಸೆ ಇಲ್ಲವೇ? ದೇಶದ ನಾಗರಿಕರು ತಮ್ಮ ಪೌರತ್ವ ಸಾಬೀತುಪಡಿಸಲು ಈಗಾಗಲೇ ಹಲವಾರು ದಾಖಲೆಗಳು ಲಭ್ಯವಿದ್ದರೂ, ಅವುಗಳಿಗೆ ಮಾನ್ಯತೆ ನೀಡಲು ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ 31 ಮಂದಿ ಸದಸ್ಯರ ಪೈಕಿ 28 ಜನ ಪಾಲ್ಗೊಂಡಿದ್ದರು. ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ. ಉತ್ತರ ಪ್ರದೇಶದಲ್ಲಿ ಸಭೆಯನ್ನು ಆಯೋಜಿಸಿ, ಅಲ್ಲಿ ಸಿಎಎ ವಿರೋಧಿ ಹೋರಾಟದಲ್ಲಿ ಮೃತಪಟ್ಟಿರುವವರಿಗೆ ಪರಿಹಾರ ಧನ ವಿತರಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಐಯುಎಂಎಲ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇ.ಟಿ.ಮುಹಮ್ಮದ್ ಬಶೀರ್, ಮುಖಂಡ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್‌ಗೆ ಬಲಿಯಾದ ನೌಶೀನ್ ಹಾಗೂ ಜಲೀಲ್ ಕುಟುಂಬಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ವತಿಯಿಂದ ತಲಾ 5 ಲಕ್ಷ ರೂ.ಗಳ ಚೆಕ್ ಅನ್ನು ಐಯುಎಂಎಲ್ ರಾಷ್ಟ್ರೀಯ ರಾಜಕೀಯ ಸಲಹಾ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹೈದರ್ ಅಲಿ ಶಿಹಾಬ್ ತಂಙಳ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News