ಮೆಟ್ರೋ ಕಾಮಗಾರಿ: ಲಕ್ಕಸಂದ್ರದಿಂದ 103 ಕುಟುಂಬಗಳು ಕುರುಬರಹಳ್ಳಿಗೆ ಸ್ಥಳಾಂತರ

Update: 2020-02-22 15:05 GMT

ಬೆಂಗಳೂರು, ಫೆ. 22: ಗೊಟ್ಟಿಗೆರೆ-ನಾಗವಾರ ಮೆಟ್ರೋ ಯೋಜನೆಯಲ್ಲಿ ಸುರಂಗ ಮಾರ್ಗಕ್ಕಾಗಿ ಲಕ್ಕಸಂದ್ರದಲ್ಲಿ ನೆಲೆಸಿದ್ದ 103 ಕುಟುಂಬಗಳನ್ನು ಕುರುಬರಹಳ್ಳಿಗೆ ಸ್ಥಳಾಂತರಿಸಿ ನೆಲೆ ಕಲ್ಪಿಸಲು ಬಿಎಂಆರ್‌ಸಿಎಲ್ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ತೀರ್ಮಾನ ಕೈಗೊಂಡಿವೆ.

ಡೇರಿ ವೃತ್ತದಿಂದ ನಾಗವಾರದವರೆಗೆ ನಿರ್ಮಾಣವಾಗಲಿರುವ ಸುರಂಗ ಮಾರ್ಗವು ಲಕ್ಕಸಂದ್ರದಿಂದ ಹಾದುಹೋಗಲಿದೆ. ಲಕ್ಕಸಂದ್ರದಲ್ಲಿ ರಾಜ್ಯ ಸರಕಾರಕ್ಕೆ ಸೇರಿದ ಸುಮಾರು 10 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಈ ಪೈಕಿ 6 ಎಕರೆ ಜಾಗದಲ್ಲಿ(ಸರ್ವೆ ಸಂ.14 ಹಾಗೂ 15) ಕೂಲಿ, ಕಟ್ಟಡ ನಿರ್ಮಾಣ ಕೆಲಸ ಮಾಡುವ 103 ಕುಟುಂಬಗಳು ನೆಲೆಸಿವೆ.

ಈ ಕುಟುಂಬಗಳನ್ನು ತೆರವು ಮಾಡುವ ಪ್ರಯತ್ನ ಈ ಹಿಂದೆ ನಡೆದಿತ್ತು. ಆದರೆ, ಪುನರ್ವಸತಿ ಕಲ್ಪಿಸದೆ ಈ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಡಲಾಗಿತ್ತು. ನಂತರ ಬಿಎಂಆರ್‌ಸಿಎಲ್, ನಗರ ಜಿಲ್ಲಾಡಳಿತ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಡೆಸಿದ ಸಭೆಯಲ್ಲಿ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಪರ್ಯಾಯ ನೆಲೆ ಕಲ್ಪಿಸಬೇಕೆಂದು ತೀರ್ಮಾನ ಕೈಗೊಳ್ಳಲಾಗಿತ್ತು.

ಶೆಡ್‌ಗಳಲ್ಲಿರುವ ಕೂಲಿ ಕಾರ್ಮಿಕರು: ಲಕ್ಕಸಂದ್ರದಲ್ಲಿ ಕೂಲಿ ಕಾರ್ಮಿಕರು ಶೆಡ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಕುಟುಂಬಗಳನ್ನು ಕುರುಬರಹಳ್ಳಿಗೆ ಸ್ಥಳಾಂತರಿಸುವುದರ ಜತೆಗೆ ಅಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಇದಕ್ಕಾಗಿ ಬಿಎಂಆರ್‌ಸಿಎಲ್ 1.08 ಕೋಟಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಿದೆ. ನಿಯಮಗಳ ಪ್ರಕಾರ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ. ಈಗಾಗಲೇ ಜಾಗವು ಮೆಟ್ರೊ ನಿಗಮಕ್ಕೆ ಹಸ್ತಾಂತರವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News