ಜೂಜು ಕೇಂದ್ರಕ್ಕೆ ಅನುಮತಿ ಅತ್ಯಂತ ಬೇಜವಾಬ್ದಾರಿ ಕ್ರಮ: ಎಐಡಿಎಸ್‌ಒ

Update: 2020-02-22 15:13 GMT

ಬೆಂಗಳೂರು, ಫೆ. 22: ಪ್ರವಾಸೋದ್ಯಮ ಇಲಾಖೆ ಜೂಜು ಕೇಂದ್ರ(ಕ್ಯಾಸಿನೋ)ಗಳನ್ನು ತೆರೆಯಲು ಅನುಮತಿ ನೀಡಲು ಮುಂದಾಗಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಯುವಜನ ವಿರೋಧಿ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಕ್ರಮ ಎಂದು ಎಐಡಿಎಸ್‌ಒ ಟೀಕಿಸಿದೆ.

‘ಜನರ ಹಿತವನ್ನು ಗಮನದಲ್ಲಿಟ್ಟಕೊಂಡು’ ಎಂದು ಹೇಳುತ್ತಲೇ ರಾಜ್ಯ ಸರಕಾರವು ತನ್ನ ಆದಾಯದ ಮೇಲೆ ಕಣ್ಣಿಟ್ಟಿದೆ. ಈ ರೀತಿ ಜೂಜು ಕೇಂದ್ರಗಳನ್ನು ತೆರೆಯಲು ಅವಕಾಶ ಕೊಡುವುದು ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗಲು ಕುಮ್ಮಕ್ಕು ನೀಡಿದಂತಾಗುತ್ತದೆ. ‘ಕ್ಯಾಸಿನೋ’ ಆರಂಭವಾದ 3 ವರ್ಷಗಳಲ್ಲಿ ಆಸ್ತಿ ಕುರಿತ ಅಪರಾಧಗಳು ಶೇ.8ರಷ್ಟು, ಹಿಂಸಾತ್ಮಕ ಅಪರಾಧಗಳ ಸಂಖ್ಯೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ಅಮೇರಿಕದ ನೆವಾಡದ ಅಧ್ಯಯನ ಸಂಸ್ಥೆಗಳ ವರದಿಗಳು ಹೇಳುತ್ತವೆ. ಹಲವು ತಜ್ಞರು ಈ ಜೂಜಿನಿಂದಾಗಿ ದಿವಾಳಿತನ, ಆತ್ಮಹತ್ಯೆ, ಹಣದ ಕಳ್ಳ ಸಾಗಾಣಿಕೆ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಹಲವು ಜಿಲ್ಲೆಗಳ ಜನರು ಪ್ರವಾಹದಿಂದ ಇನ್ನೂ ಚೇತರಿಸಿಕೊಂಡಿಲ್ಲ. ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಿರುದ್ಯೋಗದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದೆ.

2018ರಲ್ಲಿ ಪ್ರತಿದಿನ ದೇಶದಲ್ಲಿ 36 ಮಂದಿ ನಿರುದ್ಯೋಗಿಗಳು ಮತ್ತು 35 ಮಂದಿ ಸ್ವದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಇತ್ತಿಚಿನ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಹೇಳುತ್ತದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಬಿಟ್ಟು ಜನರಿಗಾಗಿ ಏನೋ ಘನಕಾರ್ಯ ಮಾಡುತ್ತಿದ್ದೇವೆ ಎನ್ನುವಂತೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೊಂಡಿರುವುದು ಖಂಡನೀಯ ಎಂದು ಟೀಕಿಸಲಾಗಿದೆ.

ಈ ಹಿಂದೆ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸುವ ನೆಪದಲ್ಲಿ ಎಸ್ಸೆಂ ಕೃಷ್ಣ ಸರಕಾರ ಆನ್‌ಲೈನ್ ಲಾಟರಿ ಎಂಬ ಜೂಜನ್ನು ಆರಂಭಿಸಿತ್ತು. ಅದನ್ನು ರಾಜ್ಯದ ಜನತೆ ಕ್ಷಮಿಸಲಿಲ್ಲ. ಈ ಲಾಟರಿಯಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಯಿತು. ಅದರಲ್ಲೂ ಕೊಲೆ, ಸುಲಿಗೆ, ಕಳ್ಳತನ ಮತ್ತು ಈ ಲಾಟರಿ ಆಡುವ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆಯಾಯಿತು.

ಈ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್ ಜೂಜು ಮತ್ತು ಅಪರಾಧಗಳ ನಡುವಿನ ಸಂಬಂಧದ ಬಗ್ಗೆ ವರದಿಯನ್ನು ನೀಡಿತ್ತು. ರಾಜ್ಯಾದಾದ್ಯಂತ ಹೋರಾಟ ಬೆಳೆದ ಹಿನ್ನೆಲೆಯಲ್ಲಿ ಧರ್ಮಸಿಂಗ್ ಸರಕಾರ ಆನ್‌ಲೈನ್ ಲಾಟರಿ ಸೇರಿದಂತೆ ಎಲ್ಲ ತರಹದ ಲಾಟರಿಗಳ ಮೇಲೆ ನಿಷೇಧವನ್ನು ಹೇರಿತು ಎಂದು ತಿಳಿಸಲಾಗಿದೆ.

ಆದುದರಿಂದ ಇತಿಹಾಸದಿಂದ ಪಾಠ ಕಲಿತು ರಾಜ್ಯ ಸರಕಾರ ಯುವಜನರ ನೈಜ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು, ಜೂಜನ್ನು ಉತ್ತೇಜಿಸುವಂತಹ ಸಮಾಜಕ್ಕೆ ಮಾರಕವಾಗಿರುವ ಕ್ಯಾಸಿನೋ ತೆರೆಯುವ ಕೆಲಸಕ್ಕೆ ಕೈಹಾಕದೆ, ಈ ನಿರ್ಧಾರವನ್ನು ಕೂಡಲೆ ಕೈಬಿಡಬೇಕು, ಇಲ್ಲವಾದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅಧ್ಯಕ್ಷೆ ಉಮಾದೇವಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News