ಚಿನ್ನದ ಮೊಟ್ಟೆ

Update: 2020-02-22 18:52 GMT

ಬೈಲಹೊಂಗಲ ಸಮೀಪದ ಆನಿಗೋಳ ಎಂಬ ಗ್ರಾಮದಲ್ಲಿ ದುಂಡಪ್ಪನೆಂಬ ಭಕ್ತನಿದ್ದ. ಆತ ತುಂಬ ಬಡವನಾಗಿದ್ದ. ದಿನಾಲೂ ಊರಿನ ಪ್ರಸಿದ್ಧ ದೇವರಾದ ರಾಮಲಿಂಗೇಶ್ವರ ದೇವಸ್ಥಾನದ ಮೆಟ್ಟಿಲುಗಳನ್ನು ತೊಳೆದು, ತಾನೇ ತನ್ನ ಕೈಯಾರೆ ತಯಾರಿಸಿದ ಹೂವಿನ ಹಾರವನ್ನು ದೇವರಿಗೆ ಸಮರ್ಪಿಸಿ ಭಕ್ತಿಯಿಂದ ನಮಸ್ಕರಿಸುತ್ತಿದ್ದ. ಇದಾದ ನಂತರವೇ ತನ್ನ ನಿತ್ಯ ಕಾಯಕದಲ್ಲಿ ತೊಡಗುತ್ತಿದ್ದ. ಹೀಗಿರುವಾಗ ಆತನ ಒಬ್ಬನೇ ಒಬ್ಬ ಮಗನಿಗೆ ವಿಪರೀತ ಜ್ವರ ಬಂದು ತೀರಿಕೊಂಡ. ಇದರಿಂದ ದುಂಡಪ್ಪನಿಗೆ ಆಘಾತವಾಗಿ ದೇವರ ಸೇವೆಯನ್ನೇ ನಿಲ್ಲಿಸಿಬಿಟ್ಟ. ಒಂದು ದಿನ ದೇವರೇ ದುಂಡಪ್ಪನ ಕನಸಿನಲ್ಲಿ ಬಂದು ‘‘ಭಕ್ತಾ.. ಬೇಜಾರಾಗಬೇಡ. ನಿನ್ನ ಮಗನ ಆತ್ಮವನ್ನು ನಿನಗೇ ಮರಳಿ ಕೊಡುತ್ತೇನೆ. ನೀನು ಅದನ್ನು ಯಾರಿಗಾದರೂ ಕೊಡಬಹುದು’’ ಎಂದು ಹೇಳಿ ಹೋದಂತಾಯಿತು.

ಮರುದಿನ ಬೆಳಗ್ಗೆದ್ದು ಎಂದಿನಂತೆ ದೇವಸ್ಥಾನದ ಕೆಲಸ ಮುಗಿಸಿ ದುಂಡಪ್ಪಬೈಲಹೊಂಗಲದ ಶುಕ್ರವಾರದ ಸಂತೆಗೆ ಹೋಗಿ ಒಂದು ಕೋಳಿ ಖರೀದಿಸಿದ. ಅದನ್ನು ಪ್ರೀತಿಯಿಂದ ಸಾಕಿ ಬೆಳೆಸಿದ. ಅದು ತನ್ನ ಒಡೆಯನ ಮೇಲಿನ ಪ್ರೀತಿಗಾಗಿ ದುಂಡಪ್ಪನಿಗೆ ಚಿನ್ನದ ಮೊಟ್ಟೆಯನ್ನು ನೀಡಿತು. ಚಿನ್ನದ ಮೊಟ್ಟೆಯನ್ನು ನೋಡಿದ ದುಂಡಪ್ಪನಿಗೆ ಆಶ್ಚರ್ಯವಾಯಿತು. ಅದನ್ನು ಅಕ್ಕಸಾಲಿಗನ ಹತ್ತಿರ ಮಾರಿದ. ಅದರಿಂದ ಅವನಿಗೆ ಸಾಕಷ್ಟು ದುಡ್ಡು ಸಿಕ್ಕಿತು. ಅದೇ ದುಡ್ಡಿನಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನೆಲ್ಲಾ ಕೊಂಡು ತಂದ. ಹೀಗೆಯೇ ದುಂಡಪ್ಪನ ಕೋಳಿಯು ಪದೇ ಪದೇ ಚಿನ್ನದ ಮೊಟ್ಟೆಯನ್ನು ಕೊಡತೊಡಗಿತು. ದುಂಡಪ್ಪ ಈಗ ಸಾಹುಕಾರ ದುಂಡಪ್ಪನಾದ. ಸಾಕಷ್ಟು ಸುಖಸಂತೋಷಗಳನ್ನು ಅನುಭವಿಸಿದ ದುಂಡಪ್ಪನಿಗೆ ಮತ್ತೊಂದು ಆಘಾತವಾಯಿತು. ಅವನ ಮೋಹದ ಹೆಂಡತಿ ತೀರಿಕೊಂಡಳು. ಇದರಿಂದ ಅವನಿಗೆ ಜೀವನದಲ್ಲಿ ವೈರಾಗ್ಯ ಭಾವ ಮೂಡಿತು. ಈ ಆಸ್ತಿ ಅಂತಸ್ತು, ಐಶ್ವರ್ಯಗಳೆಲ್ಲವೂ ಕ್ಷಣಿಕವಾದದ್ದು ಎಂದೆನಿಸಿ ಬುದ್ಧ್ದನಂತೆ ಎಲ್ಲ ಸಂಪತ್ತನ್ನು ತ್ಯಾಗ ಮಾಡಿ ಸನ್ಯಾಸಿಯಾಗಿ ಕಾಡಿನತ್ತ ಹೊರಟ. ಅವನ ಹಿಂದೆ ಅವನು ಸಾಕಿದ ಕೋಳಿ ಕ್ಕೊ ಕ್ಕೊ ಕ್ಕೊ ಎಂದು ಬೆನ್ನು ಹತ್ತಿತ್ತು. ಕೋಳಿಯನ್ನು ಗಮನಿಸಿದ ದುಂಡಪ್ಪ ಅದನ್ನು ಉದ್ದೇಶಿಸಿ..‘‘ನನಗೆ ಜೀವನದಲ್ಲಿ ನೀನು ಸಾಕಷ್ಟು ಸಹಾಯ ಮಾಡಿರುವೆ. ಈಗ ನನಗೆ ನಿನ್ನ ಅಗತ್ಯವಿಲ್ಲ. ಇಂದಿನಿಂದ ನೀನು ಸ್ವತಂತ್ರವಾಗಿರು’’ ಎಂದು ಹೇಳಿದ. ಆಗ ಅವನಿಗೆ ತನಗೆ ಇಷ್ಟೊಂದು ಸಹಾಯ ಮಾಡಿದ ಕೋಳಿಗೆ ಏನಾದರೂ ಕೊಡಬೇಕೆನಿಸಿತು. ತನ್ನ ಜೇಬನ್ನು ಹುಡುಕಾಡಿದ. ಏನೂ ಇರಲಿಲ್ಲ. ಎಲ್ಲವನ್ನೂ ಬಿಟ್ಟು ಬಂದಿದ್ದ. ನಿರಾಶೆಯಾದ ಅವನಿಗೆ ಆಗ ಥಟ್ಟನೆ ನೆನಪಿಗೆ ಬಂದಿದ್ದು ತನ್ನ ಹತ್ತಿರವಿರುವ ತನ್ನ ಮಗನ ಆತ್ಮ. ಕೂಡಲೇ ಕೋಳಿಗೆ ತನ್ನ ಮಗನ ಆತ್ಮವನ್ನು ನೀಡುತ್ತಾ.. ‘‘ಈ ಆತ್ಮವು ನಿನಗೆ ಸಹಾಯಕವಾಗಬಹುದು. ನಿನ್ನ ಕಷ್ಟ ಕಾಲದಲ್ಲಿ ಕ್ಕೊ ಕ್ಕೊ ಕ್ಕೊ ಎಂದು ಮೂರು ಬಾರಿ ಕೂಗಿ ಮೊಟ್ಟೆಯನ್ನು ಇಡು. ಆ ಮೊಟ್ಟೆಯೊಳಗಿಂದ ನನ್ನ ಮಗ ಹೊರಗೆ ಬಂದು ನಿನಗೆ ಸಹಾಯ ಮಾಡುತ್ತಾನೆ’’ ಎಂದು ಹೇಳಿ ದುಂಡಪ್ಪ ಕಾಡಿನೊಳಗೆ ಕಣ್ಮರೆಯಾದ.

ದುಂಡಪ್ಪನ ಅಗಲಿಕೆಯಿಂದ ಕೋಳಿಗೂ ಬೇಜಾರಾಯಿತು. ಆದರೆ ಆ ಬೇಜಾರು ಬಹಳ ಹೊತ್ತು ಇರಲಿಲ್ಲ. ತಾನೇ ಸ್ವತಂತ್ರವಾಗಿ ತನಗೆ ಬೇಕಾದಂತಹ ಆಹಾರವನ್ನು ಕೋಳಿ ತಿನ್ನತೊಡಗಿತು. ಒಂದು ದಿನ ಹೀಗೆಯೆ ಕೋಳಿ ಮೈಮರೆತು ಆಹಾರ ತಿನ್ನುತ್ತಿರುವಾಗ ಕಾಡುನಾಯಿಯ ಹಿಂಡೊಂದು ಕೋಳಿಯನ್ನು ತಿನ್ನಲು ಹೊಂಚು ಹಾಕಿ ಬಂದಿತು. ಕೋಳಿಗೆ ಭಯವಾಗತೊಡಗಿತು. ಅಯ್ಯೋ! ದೇವರೆ ಹೇಗಾದರೂ ಮಾಡಿ ನನ್ನನ್ನು ಬದುಕಿಸು ಎಂದು ಬೇಡಿಕೊಳ್ಳುತ್ತಿರುವಾಗ..ದುಂಡಪ್ಪ ಹೇಳಿದ ಮಾತುಗಳು ಅದಕ್ಕೆ ನೆನಪಾದವು. ಕೂಡಲೆ ಕ್ಕೊಕ್ಕೊಕ್ಕೊ ಎಂದು ಹೇಳುತ್ತಾ ಮೊಟ್ಟೆಯನ್ನಿಟ್ಟಿತು. ಮೊಟ್ಟೆ ಕೆಳಗೆ ಬಿದ್ದು ಒಡೆದ ತಕ್ಷಣ ಅದರೊಳಗಿಂದ ಪುಟಾಣಿ ಬಾಲಕನೊಬ್ಬ ಪ್ರತ್ಯಕ್ಷನಾದ. ಕೋಳಿ ಆತನಿಗೆ ತನ್ನ ಸಂಕಷ್ಟವನ್ನು ವಿವರಿಸಿದ ತಕ್ಷಣ ಆ ಬಾಲಕ ಕಾಡು ನಾಯಿಯ ಮೇಲೆ ದಾಳಿ ಮಾಡಿದ. ಆತನ ದಾಳಿಗೆ ಬೆಚ್ಚಿ ಬಿದ್ದ ಕಾಡು ನಾಯಿಯ ದಂಡು ಚೆಲ್ಲಾಪಿಲ್ಲಿಯಾಯಿತು. ಕೋಳಿಯು ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿತು. ಕೋಳಿಯು ಬಾಲಕನಿಗೆ ಧನ್ಯವಾದ ಹೇಳಿದ ಕೂಡಲೆ ಬಾಲಕ ಮಾಯವಾದ. ಜೀವನದಲ್ಲಿ ನಾವು ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ ಎಂಬುದಕ್ಕೆ ಈ ಕೋಳಿಯ ಕಥೆಯೇ ಸಾಕ್ಷಿ.

Writer - ಆನಂದ ವೀ ಮಾಲಗಿತ್ತಿ ಮಠ

contributor

Editor - ಆನಂದ ವೀ ಮಾಲಗಿತ್ತಿ ಮಠ

contributor

Similar News