ಟೆಸ್ಟ್ ಕ್ರಿಕೆಟ್ ಪಂದ್ಯ: ಭಾರತದಿಂದ ಎಚ್ಚರಿಕೆಯ ದ್ವಿತೀಯ ಇನ್ನಿಂಗ್ಸ್

Update: 2020-02-23 03:42 GMT

ವೆಲ್ಲಿಂಗ್ಟನ್, ಫೆ.23: ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಪ್ರವಾಸಿ ಭಾರತ ತಂಡ, ನ್ಯೂಝಿಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಕಾಣಿಸುತ್ತಿವೆ. ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳ ಹಿನ್ನಡೆ ಅನುಭವಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಆರಂಭಗಾರ ಪೃಥ್ವಿಶಾ ಅವರ ವಿಕೆಟನ್ನು ಬಲುಬೇಗನೇ ಕಳೆದುಕೊಂಡಿದೆ. ಆದರೆ ಮಾಯಾಂಕ್ ಅಗರ್ ವಾಲ್ ಆಕರ್ಷಕ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದ್ದಾರೆ.

ಇದಕ್ಕೂ ಮೊದಲು ಇಶಾಂತ್ ಶರ್ಮಾ (5/68) ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಅತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ 348 ರನ್ ಗಳಿಸಿತು. ನಿನ್ನೆ ದಿನದಾಟ ಅಂತ್ಯಕ್ಕೆ ನ್ಯೂಝಿಲೆಂಡ್ ತಂಡ 5 ವಿಕೆಟ್‌ಗೆ 216 ರನ್ ಗಳಿಸಿತ್ತು. ಉಳಿದ ಐದು ವಿಕೆಟ್‌ಗಳಿಂದ ಇಂದು ಬೆಳಗ್ಗಿನ ಅವಧಿಯಲ್ಲಿ 132 ರನ್‌ಗಳನ್ನು ಗಳಿಸಿದ ನ್ಯೂಝಿಲೆಂಡ್ ತಂಡ ದೊಡ್ಡ ಮೊತ್ತ ಪೇರಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಟ್ರೆಂಟ್ ಬೋಲ್ಟ್ ಅವರ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ (14) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 31 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ. 52 ರನ್ ಗಳಿಸಿದ ಕನ್ನಡಿಗ ಮಯಾಂಕ್ ಅಗರ್‌ವಾಲ್ ಮತ್ತು ಎಚ್ಚರಿಕೆಯ ಆಟವಾಡುತ್ತಿರುವ ಚೇತೇಶ್ವರ ಪೂಜಾರ 11 (76 ಎಸೆತ) ಇನಿಂಗ್ಸ್ ಕಟ್ಟುವ ಪ್ರಯತ್ನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News