ಸಿಎಎ ಕೇವಲ ಕಾಂಗ್ರೆಸ್ ವಿಚಾರವಲ್ಲ, ದೇಶದ ವಿಚಾರ: ಡಿ.ಕೆ.ಶಿವಕುಮಾರ್

Update: 2020-02-23 11:48 GMT

ಬೆಂಗಳೂರು, ಫೆ. 23: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನದಲ್ಲಿರುವ ಅಮೂಲ್ಯ ವಿಚಾರದಲ್ಲಿ ಆತುರಪಡುವುದು ಬೇಡ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಅಮೂಲ್ಯ ಲಿಯೋನ ಪ್ರಕರಣದಲ್ಲಿ ಆಕೆಯ ಪರವಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ರಾಜಕಾರಣವನ್ನು ಒಂದು ಇತಿಮಿತಿಯಲ್ಲಿ ಮಾಡಬೇಕು ಎಂದು ಹೇಳಿದರು.

ದೇಶದ ವಿಚಾರ ಬಂದಾಗ ನಾವು ದೇಶಕ್ಕೆ ಆದ್ಯತೆ ನೀಡಬೇಕು. ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಾನೂ ಅದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಆದರೆ, ಆ ಹೆಣ್ಣು ಮಗಳು ಏನು ಹೇಳಲು ಹೊರಟಿದ್ದಳು ಎಂಬುದನ್ನೂ ತಿಳಿದುಕೊಳ್ಳಬೇಕೆಂದು ಸಲಹೆ ಮಾಡಿದರು.

ಅಮೂಲ್ಯ ಹಿಂದೆ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿರುವುದನ್ನು ನೋಡಿದ್ದೇನೆ. ಹೀಗಾಗಿ ಆಕೆ ಏನು ಹೇಳಲು ಹೊರಟಿದ್ದಳು ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಆತುರಪಡುವುದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ವಿಚಾರವಲ್ಲ: ಸಿಎಎ ವಿಚಾರ ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿದ್ದಲ್ಲ. ಇದು ದೇಶಕ್ಕೆ ಸಂಬಂಧಿಸಿದ ವಿಚಾರ. ಬಿಜೆಪಿಯವರಿಗೆ ಕಾಂಗ್ರೆಸ್ ಮಾತ್ರ ಕಾಣುತ್ತಿದ್ದು ಹೀಗಾಗಿ ಎಲ್ಲ ವಿಚಾರದಲ್ಲೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಸಿಎಎ ವಿಚಾರ ಕಾಂಗ್ರೆಸ್ ಜನರಿಗೆ ಬಿಟ್ಟಿದೆ. ಇದನ್ನು ವಿರೋಧಿಸುತ್ತಿರುವವರು ತಮ್ಮದೇ ಆದ ರೀತಿಯಲ್ಲಿ ವಿರೋಧ ಮಾಡುತ್ತಿದ್ದಾರೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬೇರೆ-ಬೇರೆ ರಾಷ್ಟ್ರಗಳೂ ಇದನ್ನು ಗಮನಿಸುತ್ತಿವೆ. ಈ ಕಾಯ್ದೆ ಜಾರಿ ನಂತರ ಆರ್ಥಿಕ ಕಡಿತಕ್ಕೆ ಅನೇಕ ರಾಷ್ಟ್ರಗಳಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರಕ್ಕೆ ಗೊತ್ತಾಗಿದೆ ಎಂದರು.

ಸಿಎಎ ಜಾರಿ ನಂತರ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ನಮ್ಮ ವಿದ್ಯಾವಂತ ಯುವ ಸಮೂಹ ಅಮೆರಿಕ, ಯುರೋಪ್ ನಂತಹ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರು ಆ ದೇಶದಲ್ಲಿ ಅಲ್ಪಸಂಖ್ಯಾತರು. ಈ ಕಾಯ್ದೆ ಜಾರಿ ನಂತರ ಅವರನ್ನು ಬೇರೆ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿದರು.

ರಾಜಕೀಯದಲ್ಲಿ ಹಸ್ತಕ್ಷೇಪ ಸಲ್ಲ: ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಅಮೆರಿಕದಲ್ಲಿ ತಮ್ಮದೆ ಆದ ಪ್ರಚಾರ ಮಾಡಿದರು. ಆದರೆ, ನಮ್ಮ ದೇಶದ ಪ್ರಧಾನಿ ಮೋದಿಯವರು ತಮ್ಮ ಭಾಷಣದ ಅಂತ್ಯದಲ್ಲಿ ಮುಂದಿನ ಬಾರಿ ಟ್ರಂಪ್ ಸರಕಾರ ಎಂದು ಹೇಳಿದ್ದು ಸಲ್ಲ ಎಂದು ಆಕ್ಷೇಪಿಸಿದರು.

ಅಲ್ಲಿ ಯಾವುದೇ ಪಕ್ಷದ ನಾಯಕರು ಅಧ್ಯಕ್ಷರಾದರೆ ನಾವು ಅವರನ್ನು ಅಮೆರಿಕ ಅಧ್ಯಕ್ಷರನ್ನಾಗಿ ನೋಡುತ್ತೇವೆ. ನಮ್ಮಲ್ಲಿ ಯಾವುದೆ ಪಕ್ಷದ ನಾಯಕರು ಪ್ರಧಾನಿಯಾದರೆ ಅವರು ಭಾರತದ ಪ್ರಧಾನಿಯಾಗಿ ನೋಡುತ್ತಾರೆ. ಹೀಗಾಗಿ ಒಂದು ದೇಶದ ಪ್ರಧಾನಿಯಾಗಿ ಮತ್ತೊಂದು ದೇಶದ ರಾಜಕೀಯದಲ್ಲಿ ಪರವಾಗಿ ಮಾತನಾಡಿ ಹಸ್ತಕ್ಷೇಪ ಮಾಡುವುದು ನಮ್ಮ ಕರ್ತವ್ಯವಲ್ಲ. ಇದು ನಮ್ಮ ದೇಶದ ಚರಿತ್ರೆಯಲ್ಲೇ ದೊಡ್ಡ ಪೆಟ್ಟಾಗಿದೆ. ದೇಶಗಳ ನಡುವಣ ರಾಯಭಾರತ್ವ ಆಯಾ ದೇಶಗಳ ನಡುವಣ ಸಂಬಂಧ ವೃದ್ಧಿಗೆ ಇರಬೇಕೆ ಹೊರತು, ರಾಜಕೀಯ ಲಾಭಕ್ಕಾಗಿ ಅಲ್ಲ. ಆ ದೇಶದಿಂದ ನಮಗೆ ಏನು ಒಳ್ಳೆಯದಾಗುತ್ತದೆ ಎಂಬುದನ್ನು ನೋಡಬೇಕೇ ಹೊರತು. ಅವರ ಆಂತರಿಕ ರಾಜಕೀಯ ನಮಗೇಕೆ ಬೇಕು?

ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಿಸಾ ನಿರಾಕರಿಸಿದ್ದನ್ನು ಮರೆತಿರಬೇಕು. ವೈಯಕ್ತಿಕ ಕಾರ್ಯಕ್ರಮದಲ್ಲಿ ಹೋಗಿದ್ದರೆ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಆದರೆ ಭಾರತದ ಪ್ರಧಾನಿಯಾಗಿ ಹೋದಾಗ ಈ ರೀತಿಯ ಪ್ರಚಾರ ಸರಿಯಲ್ಲ ಎಂದು ಶಿವಕುಮಾರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News