ಬರಹಗಾರರು ಬೀದಿಗೆ ಬಂದು ಹೋರಾಡಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ

Update: 2020-02-23 12:55 GMT

ಬೆಂಗಳೂರು, ಫೆ.23: ದಲಿತ, ಬಂಡಾಯದ ಕಾಲಘಟ್ಟವಾದ 70, 80ರ ದಶಕಗಳಿಗಿಂತ ಇವತ್ತಿನ ದಿನಗಳಲ್ಲಿ ಸಾಹಿತಿಗಳು, ಬರಹಗಾರರು ಬೀದಿಗೆ ಬಂದು ಜನರ ಹೋರಾಟದಲ್ಲಿ ಭಾಗಿಗಳಾಗಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.

ರವಿವಾರ ಸಂಸ ಥಿಯೇಟರ್ ಹಾಗೂ ಕಿರಂ ಪ್ರಕಾಶನ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಕವಯತ್ರಿ ಎಚ್.ಎಲ್.ಪುಷ್ಪರವರ ಮದರಂಗಿ ವೃತ್ತಾಂತ, ಸೋಲಾಬರಸ್ ಹುಡುಗರು ಹಾಗೂ ಎಕ್ಕದ ಬೀಜ ಹಾಗೂ ಅಮೃತಮತಿ ಸ್ವಗತ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದಲಿತ ಹಾಗೂ ಬಂಡಾಯ ಚಳವಳಿಯ ಆರಂಭದ ದಿನಗಳಲ್ಲಿ ಬರಹಗಾರರು ಬೀದಿಗೆ ಬಂದು ಜನಚಳವಳಿಯಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡುತ್ತಿದ್ದೆವು. ಆಗ ಸಾಕಷ್ಟು ಮಂದಿ ಬರಹಗಾರರು ಹೋರಾಟಗಳಲ್ಲಿ ನಿರಂತರವಾಗಿ ಭಾಗವಹಿಸಿರುವುದನ್ನು ಕಾಣುತ್ತೇವೆ. ಈಗ ಅದಕ್ಕಿಂತಲೂ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬರಹಗಾರರ, ಸಾಹಿತಿಗಳು ಜನಚಳವಳಿಯೊಂದಿಗೆ ನಿಲ್ಲಬೇಕಾದ ಪರಿಸ್ಥಿತಿಯಲ್ಲಿದ್ದೇವೆಂದು ಅವರು ತಿಳಿಸಿದರು.

ಸ್ತ್ರೀ ಸ್ವಾತಂತ್ರ್ಯ ಎನ್ನುವುದು ಅವಳ ಆಯ್ಕೆಯ ವಿಷಯವಾಗಬೇಕೆ ವಿನಃ ಪುರುಷ ನೀಡುವ ಭಿಕ್ಷೆಯಾಗಬಾರದು ಹಾಗೂ ನವ್ಯ ಕಾಲಘಟ್ಟದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದ ಮಹಿಳೆಯ ಲೈಂಗಿಕ ಸ್ವಾತಂತ್ರ್ಯ ಒಂದೇ ಮಹಿಳೆಯರ ಬಿಡುಗಡೆಯಲ್ಲ ಎಂಬುದನ್ನು ಸಹ ನಾವು ಮನಗಾಣಬೇಕಿದೆ ಎಂದು ಅವರು ಹೇಳಿದರು.

ಕಾವ್ಯ ಅನ್ನುವುದು ಬಹಿರಂಗ ಹಾಗೂ ಅಂತರಂಗದ ಅನುಸಂಧಾನದಲ್ಲಿ ಸೃಷ್ಟಿಯಾಗುವಂತಹದ್ದಾಗಿದೆ. ಚಳವಳಿಯಲ್ಲಿ ಕಂಡುಂಡ ಅನುಭವವನ್ನೇ ತನ್ನ ಕಾವ್ಯ ಹಾಗೂ ಇನ್ನಿತರೆ ಬರಹ ರೂಪದಲ್ಲಿ ಸೃಜನಾತ್ಮಕವಾಗಿ ಕಟ್ಟಿಕೊಡುವುದೇ ಬರಹಗಾರರ ಸವಾಲಾಗಿದೆ. ಇದರಲ್ಲಿ ಕವಯತ್ರಿ ಎಚ್.ಎಲ್.ಪುಷ್ಪಾ ಯಶಸ್ವಿಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕವಯತ್ರಿ ಎಂ.ಎಸ್.ಆಶಾದೇವಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಕಾವ್ಯ ಪರಂಪರೆಯ ಅಭಿವ್ಯಕ್ತಿಗಳನ್ನು ನೋಡಬೇಕಾಗಿರುವ ಸಂವೇದನೆ ಇವತ್ತಿಗಾದರೂ ರೂಪಗೊಂಡಿದಿಯೇ ಎಂಬ ಪ್ರಶ್ನೆ ಇವತ್ತಿಗೂ ಹಾಗೆಯೇ ಉಳಿದಿದೆ ಎಂದು ವಿಷಾದಿಸಿದರು.

ನಮ್ಮ ಸಾಹಿತ್ಯ ಕ್ಷೇತ್ರವು ಪುರುಷ ಅನುಭವವನ್ನೇ ಮಾನವ ಅನುಭವವೆಂದು ಕರೆಯಲಾಗಿದೆ. ಇಲ್ಲಿ ಮಹಿಳಾ ಮೀಮಾಂಸೆಗೆ ಜಾಗವೇ ಇಲ್ಲವಾಗಿದೆ. ಅದು ತಳ ಸಮುದಾಯದ ಅಸ್ಮಿತೆಗಾಗಿ ರೂಪಗೊಂಡ ದಲಿತ, ಬಂಡಾಯ ಚಳವಳಿಯಲ್ಲಿಯೂ ಮಹಿಳಾ ಸಂವೇದನೆಗೆ ಎಷ್ಟು ಜಾಗವಿದೆ ಎಂಬುದನ್ನು ಹುಡುಕಬೇಕಿದೆ ಎಂದು ಅವರು ಹೇಳಿದರು.

ರಾಮಾಯಣದ ಸೀತೆಯ ಬದುಕನ್ನು ಪುರುಷ ನೋಡುವುದಕ್ಕೂ ಮಹಿಳಾ ನಿರೂಪಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇದನ್ನು ಇವತ್ತಿನ ಸಾಹಿತ್ಯ ಗಂಭೀರವಾಗಿ ಅವಲೋಕಿಸಬೇಕಿದೆ ಎಂದು ಅವರು ಅಭಿಪ್ರಾಯಿಸಿದರು. ಈ ವೇಳೆ ಕವಯತ್ರಿ ಎಚ್.ಎಲ್.ಪುಷ್ಪಾ, ಪ್ರತಿಭಾ ನಂದಕುಮಾರ್ ಹಾಗೂ ಡಾ.ಕವನಾ ಮತ್ತಿತರರಿದ್ದರು.

ಕವಿತೆ ಓದುವವರನ್ನು ಜೈಲಿಗೆ ಹಾಕುವ ಇವತ್ತಿನ ಸಂದರ್ಭದಲ್ಲಿ ಕವಯತ್ರಿ ಎಚ್.ಎಲ್.ಪುಷ್ಪಾ ಮೂರ್ನಾಲ್ಕು ದಶಕದ ಕವಿತೆಗಳು ಇವತ್ತಿನ ರಾಜಕೀಯ, ಸಾಮಾಜಿಕ ಸನ್ನಿವೇಶಕ್ಕೆ ಅಗತ್ಯ ಎನ್ನಿಸುವಂತಿದೆ. ಇವತ್ತಿನ ನೇತಾರರು ಧ್ವೇಷದಿಂದ ಕೂಡಿದ್ದ ಮಾತುಗಳನ್ನೇ ಬಳಸುವ ಮೂಲಕ ಭಾಷೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ. ಹೀಗಾಗಿ ಜನಪರಂಪರೆಯ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಹಿತಿಗಳು ಜನ ಚಳವಳಿಯ ಭಾಗವಾಗಬೇಕಿದೆ.

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News