ಸಿಎಎಗೆ ವಿರೋಧ: ಬೆಂಗಳೂರಿನ 'ಬಿಲಾಲ್ ಬಾಗ್' ಪ್ರತಿಭಟನಾಕಾರರಿಗೆ ಸಿಖ್ಖರ ಬೆಂಬಲ

Update: 2020-02-23 12:52 GMT

ಬೆಂಗಳೂರು, ಫೆ.23: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಕಳೆದ 15 ದಿನಗಳಿಂದ ನಗರದ ಟ್ಯಾನರಿ ರಸ್ತೆಯಲ್ಲಿರುವ ಬಿಲಾಲ್ ಬಾಗ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಸಿಖ್ ಸಮುದಾಯದವರು ಬೆಂಬಲ ನೀಡಿದರು.

ರವಿವಾರ ಬಿಲಾಲ್ ಬಾಗ್‌ಗೆ ಭೇಟಿ ನೀಡಿದ ಸಿಖ್ ಸಮುದಾಯದವರು ಸ್ಥಳದಲ್ಲೆ ಗುರುನಾನಕ್ ಅವರ ಕೀರ್ತನೆಗಳನ್ನು ಹಾಡುವ ಮೂಲಕ ಜಾತ್ಯತೀತವಾಗಿ ನಡೆಯುತ್ತಿರುವ ಈ ಪ್ರತಿಭಟನೆಗೆ ನಮ್ಮ ಬೆಂಬಲವು ಸದಾಕಾಲ ಇರುತ್ತದೆ ಎಂಬ ಸಂದೇಶವನ್ನು ನೀಡಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್, ಬಸವಣ್ಣ ರಚಿಸಿದ ಅನುಭವ ಮಂಟಪದ ಮಾದರಿಯೇ ನಮ್ಮ ದೇಶದ ಜಾತ್ಯತೀತ ಸಂವಿಧಾನಕ್ಕೆ ಪ್ರೇರಕವಾದದ್ದು. ಕೇಂದ್ರ ಸರಕಾರವು ಜಾತಿ, ಧರ್ಮಗಳ ನಡುವೆ ಒಡಕು ಉಂಟು ಮಾಡುವಂತಹ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ನಾಡು ಜಾತ್ಯತೀತ ಪರಂಪರೆಗೆ ಸಾಕ್ಷಿಯಾಗಿದೆ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಪರಸ್ಪರ ಅನ್ಯೋನತೆಯಿಂದ ಬಾಳುತ್ತಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು. ಇಡೀ ದೇಶದಲ್ಲಿ ಇವತ್ತು ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ದೇಶದ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಈ ವಿವಾದಿತ ಕಾನೂನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ್ತಿ ಮೀನಾ ಕೃಷ್ಣಭೈರೇಗೌಡ ಮಾತನಾಡಿ, ಕೇಂದ್ರ ಸರಕಾರವು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟಿದೆ. ಹಿಂದೂ ಹಾಗೂ ಮುಸ್ಲಿಮರ ನಡುವೆ ಒಡಕು ಮೂಡಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ದೂರಿದರು.

ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ಬಡತನ, ಬೆಲೆ ಏರಿಕೆ ಕುರಿತು ಪ್ರಶ್ನಿಸಿದರೆ, ಪಾಕಿಸ್ತಾನದ ಬಗ್ಗೆ ನರೇಂದ್ರ ಮೋದಿ ಮಾತನಾಡುತ್ತಾರೆ. ನಮಗೂ ಪಾಕಿಸ್ತಾನಕ್ಕೂ ಏನು ಸಂಬಂಧ. ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಯಾವ ಪ್ರಯತ್ನಗಳನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಳೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಅವರು ಆಗ್ರಾದ ತಾಜ್‌ಮಹಲ್ ಅನ್ನು ವೀಕ್ಷಿಸಲಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ, ಅಲ್ಲಿನ ಪ್ರವಾಸೋದ್ಯಮ ಇಲಾಖೆ ಮೂಲಕ ಹೊರತಂದಿರುವ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಿಂದ ಮೊಗಲ್ ದೊರೆ ಕಟ್ಟಿಸಿದ ತಾಜ್‌ಮಹಲ್ ಅನ್ನು ಕೈ ಬಿಟ್ಟಿದ್ದಾರೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News