ಸಾಮಾಜಿಕ ಸೇವೆಗೆ ನಿಧಿ ಸಂಗ್ರಹಕ್ಕಾಗಿ ‘ಆರ್‌ಆರ್ ರನ್ ಮ್ಯಾರಾಥಾನ್‌‘

Update: 2020-02-23 13:55 GMT

ಬೆಂಗಳೂರು, ಫೆ. 23: ಮಕ್ಕಳ ಶಿಕ್ಷಣ, ಮಹಿಳಾ ಆರೋಗ್ಯ ಜಾಗೃತಿ ಸೇರಿದಂತೆ ಮತ್ತಿತರೆ ಸಾಮಾಜಿಕ ಸೇವೆಗಳಿಗಾಗಿ ಹಣ ಸಂಗ್ರಹ ಮಾಡುವ ಉದ್ದೇಶದಿಂದ ರಾಜರಾಜೇಶ್ವರಿನಗರ ಕೇಂದ್ರ ರೋಟರಿ ಹಾಗೂ ಮೈನ್‌ಟ್ರೀ ಸಂಸ್ಥೆಯ ವತಿಯಿಂದ ಆರ್‌ಆರ್ ರನ್ ಮ್ಯಾರಾಥಾನ್ ಅನ್ನು ಆಯೋಜಿಸಲಾಗಿತ್ತು.

ರವಿವಾರ ಮುಂಜಾನೆ ಐದು ಗಂಟೆಗೆ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ವಿಲೇಜ್‌ನಲ್ಲಿ ಆಯೋಜಿಸಿದ್ದ ಮ್ಯಾರಾಥಾನ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಹಿರಿಯರು ಪಾಲ್ಗೊಂಡಿದ್ದರು. ರೋಟರಿ ಜಿಲ್ಲಾ ಗವರ್ನರ್ ಸಮೀರ್ ಹರಿಯಾನಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು.

ಈ ವರ್ಷ 21ಕೆ, 10ಕೆ, 5ಕೆ ಹಾಗೂ 2 ಕೆ(ಫನ್ ರನ್ ಅಂಡ್ ವಾಕ್) ಎಂಬ ನಾಲ್ಕು ವಿಭಾಗಗಳಲ್ಲಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದವರು, ದೇಶದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಇದ್ದರು. ವಿವಿಧ ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರು, ವೃತ್ತಿಪರ ಓಟಗಾರರು, ತಾಂತ್ರಿಕ ವೃತ್ತಿಪರರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪಾಲುದಾರರಾಗಿ ಮೈಂಡ್‌ ಟ್ರೀ ಮುಖ್ಯವಾದ ಪಾತ್ರ ವಹಿಸಿದ್ದರೆ, ರಾಜರಾಜೇಶ್ವರಿ ನಗರ ರೋಟರಿಯು ಶತಮಾನೋತ್ಸವದ ಭಾಗವಾಗಿ ಪಾಲ್ಗೊಂಡಿತ್ತು. ಇನ್ನು, ಡೈರಿ ಡೇ ಐಸ್ ಕ್ರೀಂ, ವೈದ್ಯಕೀಯ ಪಾಲುದಾರರಾಗಿ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎಸ್ಸೀ ಎಂಟರ್ ಪ್ರೈಸಸ್, ಸಿನೆಕ್ರೋನ, ಮಾಲು ವೈರ್ಸ್ ಸೇರಿದಂತೆ ಅನೇಕರು ಬೆಂಬಲಿಸಿದ್ದರು. ಇದೇ ವೇಳೆ ‘ವಾರ್ತಾಭಾರತಿ’ ಮಾಧ್ಯಮ ಸಹಭಾಗಿತ್ವ ನೀಡಲಾಗಿತ್ತು.

ಮ್ರೈಂಡ್‌ಟ್ರೀ ಸಂಸ್ಥೆಯ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮಾತನಾಡಿ, ರೋಟರಿ ಸೇರಿದಂತೆ ಮತ್ತಿತರೆ ಸಂಸ್ಥೆಗಳು ಸಾಮಾಜಿಕ ಕೆಲಸಗಳನ್ನು ಮಾಡುತ್ತಿವೆ. ಅವುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಮ್ಯಾರಾಥಾನ್ ಆಯೋಜಿಸಲಾಗಿದೆ. ಈ ಮೂಲಕ ಬರುವ ಹಣವನ್ನು ಸಮಾಜ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸುತ್ತೇವೆ ಎಂದು ಹೇಳಿದರು.

ಆರ್‌ಆರ್‌ರನ್ ಮ್ಯಾರಾಥಾನ್‌ನ ಉದ್ದೇಶ ಮಕ್ಕಳ ಶಿಕ್ಷಣ, ಸರಕಾರಿ ಶಾಲೆಗಳ ಸುಧಾರಣೆ, ಮೂಲ ಸೌಕರ್ಯ ಕಲ್ಪಿಸುವುದು, ಮಹಿಳೆಯರ ಆರೋಗ್ಯ ರಕ್ಷಣೆ, ಹಿರಿಯ ನಾಗರೀಕರು, ನೀರು ಮತ್ತು ನೈರ್ಮಲ್ಯ ಸೇರಿದಂತೆ ಹಲವು ಸಾಮಾಜಿಕ ಸೇವೆಗಳನ್ನು ಮಾಡುವುದಕ್ಕೆ ಹಣ ಸಂಗ್ರಹಿಸುವುದಾಗಿದೆ. ಇದಕ್ಕೆ ನೋಂದಣಿ ಮಾಡಿಕೊಂಡವರಿಂದ ಸಂಗ್ರಹವಾದ ಹಣವನ್ನು ಇದಕ್ಕೆ ಮೀಸಲಿಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮ್ಯಾರಾಥಾನ್‌ನಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. 21-ಕೆ ಪುರುಷ ವಿಭಾಗದಲ್ಲಿ ಡೇನಿಯಲ್ ಲಂಗಾಟ್, ಮಹಿಳಾ ವಿಭಾಗದಲ್ಲಿ ಕೆ.ಎಂ.ಅರ್ಚನಾ ಹಾಗೂ 10-ಕೆ ಪುರುಷ ವಿಭಾಗದಲ್ಲಿ ಎ.ಬಿ.ಚೆಂಗಪ್ಪ, ಮಹಿಳಾ ವಿಭಾಗದಲ್ಲಿ ಬಿಮ್ಲಾ ಚಂದ್ ಪ್ರಶಸ್ತಿ ಪಡೆದರು. ಈ ವೇಳೆ ರನ್‌ನ ಬ್ರಾಂಡ್ ಅಂಬಾಸಿಡರ್ ವನಿತಾ ಅಶೋಕ್, ಆರ್‌ಆರ್ ರನ್‌ನ ಉಪಾಧ್ಯಕ್ಷ ಸತೀಶ್ ಮಾಧವನ್, ಶಶಿಧರ್, ಕಾರ್ತಿಕ್, ಡಾ.ಕಿರಣ್ ರಾವ್ ಸೇರಿದಂತೆ ಮತ್ತಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News