ದೇಶದ ಐಕ್ಯತೆಗೆ ಯುವಜನರ ಸಹಕಾರ ಅಗತ್ಯ: ಕೇಂದ್ರ ಸಚಿವ ಸದಾನಂದಗೌಡ

Update: 2020-02-23 12:56 GMT

ಬೆಂಗಳೂರು, ಫೆ.23: ವಿವಿಧತೆಯಲ್ಲಿ ಏಕತೆ ಸಾಧಿಸಲು ದೇಶದ ಎಲ್ಲ ಯುವಜನರ ಸಹಕಾರ ಅಗತ್ಯವಾಗಿದೆ. ಯುವಕರಿಗೆ ಬೆಂಗಳೂರು ಉತ್ತಮ ವೇದಿಕೆಯಾಗಿದ್ದು, ಅನಗತ್ಯ ಚಟುವಟಿಕೆಗಳತ್ತ ಗಮನಹರಿಸಬಾರದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಡಾ.ಅನಿಬೆಸೆಂಟ್ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಶೋಧನಾ ಸಂಸ್ಥೆಯಲ್ಲಿ, ಭಾರತ ಸರಕಾರದ ಫಿಟ್ ಇಂಡಿಯಾ ಮತ್ತು ನೆಹರು ಯುವ ಕೇಂದ್ರ ಸಂಘಟನೆಯ ಸಹಯೋಗದಲ್ಲಿ ಏರ್ಪಡಿಸಲಾದ ನಾಲ್ಕನೆ ರಾಷ್ಟ್ರೀಯ ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಳದಿಂದ ಹಲವು ಸಮಸ್ಯೆ ಉಂಟಾಗುತ್ತದೆ. ಆದರೆ, ಭಾರತಕ್ಕೆ ಮಾನವ ಸಂಪನ್ಮೂಲ ಅತ್ಯಧಿಕ ಕೊಡುಗೆ ನೀಡುತ್ತಿದ್ದು, ದೇಶದ ಯುವಕರ ಶಕ್ತಿ ಅಗಾಧವಾಗಿದೆ. ಕೇಂದ್ರ ಸರಕಾರದ ಫಿಟ್ ಇಂಡಿಯಾ ಅಡಿಯಲ್ಲಿ ದೇಶದ ಯುವಕರು ಸದೃಢರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಈಶಾನ್ಯ ರಾಜ್ಯಗಳಿಗೆ ಕೇಂದ್ರ ಸರಕಾರವು ಎಲ್ಲ ಸೌಲಭ್ಯಗಳನ್ನು ನೀಡಿದೆ, ಈಶಾನ್ಯ ರಾಜ್ಯಗಳು ಔದ್ಯೋಗಿಕವಾಗಿ ಬೆಳೆಯುತ್ತಿದ್ದು, ಅಕ್ರಮ ಚಟುವಟಿಕೆಗಳಿಗೆ ಹೆಬ್ಬಾಗಿಲು ಆಗಬಾರದು. ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು, ಈ ನಿಟ್ಟಿನಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಸದಾನಂದಗೌಡ ತಿಳಿಸಿದರು.

ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ, ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ರಾಜ್ಯಗಳ ಶಿಬಿರಾರ್ಥಿಗಳು ಈಶಾನ್ಯ ರಾಜ್ಯಗಳ ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಯುವಕರಿಂದ ಭಾರತವೂ ಪ್ರಥಮ ಸ್ಥಾನದಲ್ಲಿರಲಿ ಎಂದು ಹೇಳುವ ಮೂಲಕ ನೆಹರು ಯುವ ಕೇಂದ್ರಕ್ಕೆ ಶುಭಾಶಯ ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಯುವ ವಿನಿಮಯ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದ್ದು, ಈಶಾನ್ಯ ರಾಜ್ಯಗಳು ಯುವ ಸಾಂಸ್ಕೃತಿಕ ವಿನಿಮಯ ಕಲಿತಿರುವುದು ಸಂತಸ ತಂದಿದೆ. ವಿವಿಧತೆಯಲ್ಲಿ ಏಕತೆ ಕಲಿತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಯಾನಂದ್, ಹಿರೇಮಠ, ಚೆಲ್ಲಯ್ಯ ಸೇರಿದಂತೆ ಎಂಟು ಈಶಾನ್ಯ ರಾಜ್ಯಗಳ 250ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಮತ್ತಿತ್ತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News