ಸಿಎಎ ವಿರುದ್ಧದ ಹೋರಾಟಕ್ಕೆ ಪ್ರಗತಿಪರ, ದಲಿತ ಸಂಘಟನೆಗಳು ಒಂದಾಗಬೇಕು: ದೇವನೂರು ಮಹಾದೇವ

Update: 2020-02-23 14:27 GMT

ಬೆಂಗಳೂರು, ಫೆ.23: ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರು ತಮ್ಮ ಬಣಗಳನ್ನು ಬದಿಗಿಟ್ಟು ಒಟ್ಟಾಗುವ ಮೂಲಕ ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟವನ್ನು ಮುನ್ನಡೆಸಬೇಕೆಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಆಶಿಸಿದ್ದಾರೆ.

ರವಿವಾರ ಭಾರತದ ಸಂವಿಧಾನಿಕ ಮೌಲ್ಯಗಳನ್ನು ಅನುಷ್ಟಾನಗೊಳಿಸುವಂತೆ ಹಾಗೂ ಎನ್‌ಆರ್‌ಸಿ, ಸಿಎಎಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಹಿರಿಯ ಸಮಾಜವಾದಿಗಳ ನೇತೃತ್ವದಲ್ಲಿ ದೇಶಾದ್ಯಂತ ಹಮ್ಮಿಕೊಂಡಿರುವ ಸಮಾಜವಾದಿ ವಿಚಾರ ಯಾತ್ರೆಯನ್ನು ನಗರದ ಪುರಭವನದ ಮುಂಭಾಗ ಸ್ವಾಗತಿಸಿ ಅವರು ಮಾತನಾಡಿದರು.

ದೇಶದ ಜನತೆ ಬಿಜೆಪಿ ನಾಯಕರನ್ನು ನಿರುದ್ಯೋಗ, ಬೆಲೆ ಏರಿಕೆ, ದೇಶದ ಆರ್ಥಿಕ ಕುಸಿತದ ಬಗ್ಗೆ ಪ್ರಶ್ನಿಸಿದರೆ, ನಿಮ್ಮ ಪೌರತ್ವದ ದಾಖಲೆ ತೋರಿಸಿಯೆಂದು ಉತ್ತರದ ರೂಪದಲ್ಲಿ ಬೆದರಿಸುತ್ತಿದ್ದಾರೆ. ಇಂತಹ ಆತಂಕದ ಸ್ಥಿತಿಯಲ್ಲಿ ದೇಶವು ನಲುಗುತ್ತಿರುವಾಗ ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರ ಜವಾಬ್ದಾರಿ ಹೆಚ್ಚಿದ್ದು, ತಮ್ಮ ತಮ್ಮ ಬಣಗಳನ್ನು ಬಿಟ್ಟು ಒಂದೇ ವೇದಿಕೆಯಲ್ಲಿ ಐಕ್ಯವಾಗುವ ಮೂಲಕ ಎನ್‌ಆರ್‌ಸಿ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಮಾತನಾಡಿ, ದೇಶದ ಮತದಾರರು ಬಿಜೆಪಿಗೆ ಸಾಕಷ್ಟು ಅವಕಾಶವನ್ನು ನೀಡಿದ್ದಾರೆ. ಇದನ್ನು ಬಳಸಿಕೊಂಡು ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವಂತಹ ಅವಕಾಶವಿತ್ತು. ಆದರೆ, ಬಿಜೆಪಿ ಅದಕ್ಕೆ ವ್ಯತಿರಿಕ್ತವಾಗಿ ದೇಶವನ್ನು ಹತ್ತಾರು ವರ್ಷಗಳ ಹಿಂದಕ್ಕೆ ಕೊಂಡೊಯ್ಯಿದಿದ್ದಾರೆಂದು ಆರೋಪಿಸಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ದೇಶದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ ಹೆಚ್ಚಳ ಹಾಗೂ ಕೃಷಿ ವಿರುದ್ಧದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದನ್ನು ಮಾರೆ ಮಾಚುವುದಕ್ಕಾಗಿ ಸಿಎಎ, ಎನ್‌ಆರ್‌ಸಿ ಜಾರಿಗೆ ತರುವಂತಹ ಹುನ್ನಾರ ನಡೆಸುತ್ತಿದೆಯೆಂದು ವಿದೇಶಿ ಪತ್ರಿಕೆಗಳು ವಿಶ್ಲೇಷಿಸುತ್ತಿವೆ. ಆ ಬಗೆಯೂ ಚಿಂತನೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಈ ವೇಳೆ ಹಿರಿಯ ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಮಾಜವಾದಿ ನಾಯಕ ಅಲಿಬಾಬಾ, ರೈತ ನಾಯಕ ವೀರ ಸಂಗಯ್ಯ, ದಲಿತ ಮುಖಂಡ ಲಕ್ಷ್ಮಿ ನಾರಾಯಣ ನಾಗವಾರ, ಸಿರಿಮನೆ ನಾಗರಾಜ್, ನಗರಗೆರೆ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಮೂಲ್ಯ ದೇಶದ್ರೋಹಿ ಅಲ್ಲ

ನಗರದ ಪ್ರೀಡಂಪಾರ್ಕ್‌ನಲ್ಲಿ ಸಿಎಎ ವಿರುದ್ಧದ ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಅಮೂಲ್ಯ ಅವೇಶಕ್ಕೆ ಒಳಗಾಗಿ ಪಾಕ್‌ ಪರವಾಗಿ ಘೋಷಣೆ ಕೂಗಿದ್ದಾಳೆ. ಆಕೆಗೆ ಸಂಪೂರ್ಣವಾಗಿ ಮಾತನಾಡುವುದಕ್ಕೆ ಬಿಟ್ಟಿಲ್ಲ. ಅಷ್ಟರಲ್ಲೇ ಅವಳನ್ನು ಸರಕಾರ, ಆರೆಸ್ಸೆಸ್ ಹಾಗೂ ಪ್ರಗತಿಪರ ಮುಖಂಡರು ದೇಶದ್ರೋಹಿಯಂತೆ ಚಿತ್ರಿಸಲು ಮುಂದಾಗಿದ್ದಾರೆ. ಅವಳ ಮಾತನ್ನು ಖಂಡಿಸೋಣ. ಆದರೆ, ಅವಳನ್ನು ದೇಶದ್ರೋಹಿಯಂತೆ ಬಿಂಬಿಸುವುದು ತಪ್ಪು.

-ಪ್ರೊ.ನಗರಗೆರೆ ರಮೇಶ್, ಮಾನವ ಹಕ್ಕು ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News