ಸಿಎಎ ವಿರೋಧಿ ಪ್ರತಿಭಟನೆ: 'ಹೋರಾಟಗಳಲ್ಲಿ ಪಾಲ್ಗೊಳ್ಳಬೇಡಿ' ಎಂದವರಿಗೆ ಶತಾಯುಷಿ ದೊರೆಸ್ವಾಮಿಯ ಉತ್ತರವೇನು ?

Update: 2020-02-23 14:45 GMT

ಬೆಂಗಳೂರು, ಫೆ.23: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿ ಹೋರಾಟಗಳಲ್ಲಿ ಅಹಿತಕರ ಘಟನೆಗಳು ನಡೆದರೆ, ಅದಕ್ಕೆ ಸಂಘಪರಿವಾರ, ಅದರ ಅಂಗ ಸಂಸ್ಥೆಗಳು ಹಾಗೂ ಬಿಜೆಪಿ ಕಾರಣವಾಗುತ್ತದೆಯೇ ಹೊರತು, ಬೇರೆಯಾರಿಂದಲೂ ಇಂತಹ ಕುತಂತ್ರಗಳು ನಡೆಯಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್‌ಫೀಲ್ಡ್‌ನ ಇನ್ನರ್ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶ ವಿರೋಧಿ ಹೇಳಿಕೆಗಳು ನೀಡುವವರು ಹಾಗೂ ದೇಶ ದ್ರೋಹಿ ಕೃತ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ನಮ್ಮ ಅಭ್ಯಂತರವಿಲ್ಲ. ಆದರೆ, ಸಭೆಯಲ್ಲಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಆಯೋಜಕರಿಗೆ ತೊಂದರೆ ನೀಡಿ, ಹೋರಾಟವನ್ನೇ ದಮನ ಮಾಡಲು ಹೊರಟರೆ ಸುಮ್ಮನಿರಲ್ಲ. ಪೊಲೀಸರು ಈಗಾಗಲೇ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ನರೇಂದ್ರ ಮೋದಿ ಏನಾದರೂ ಮತ್ತೊಮ್ಮೆ ದೇಶದ ಪ್ರಧಾನಿಯಾದಲ್ಲಿ, ಅವರ ಆಡಳಿತ ವೈಖರಿ ಹಿಟ್ಲರ್ ಆಳ್ವಿಕೆಯ ಕಾಲವನ್ನು ನೆನಪಿಸುತ್ತದೆ. ಆದುದರಿಂದ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರ ಬದಲಾವಣೆ ಮಾಡುವತ್ತ ನಾವು ಹೆಜ್ಜೆ ಇಡಬೇಕು. ಇಲ್ಲದಿದ್ದರೆ, ದೇಶ ಉಳಿಯುವುದಿಲ್ಲ ಎಂದು ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಸಾರ್ವಜನಿಕರನ್ನು ನೈಜ್ಯ ಸಮಸ್ಯೆಗಳತ್ತ ಗಮನ ಹರಿಸದಂತೆ ದಿಕ್ಕು ತಪ್ಪಿಸಿ ಅಧಿಕಾರ ಅನುಭಸುತ್ತಿದೆ. ದೇಶದ ಪ್ರಗತಿಗೆ ಹಿಂದೂ ಹಾಗೂ ಮುಸ್ಲಿಮರ ನಡುವೆ ಒಗ್ಗಟ್ಟು ಇರಬೇಕು. ಮಹಾತ್ಮ ಗಾಂಧೀಜಿ ಇದೇ ಕೆಲಸವನ್ನು ಮಾಡುತ್ತಿದ್ದರು. ಆದುದರಿಂದಲೇ, ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದು ಎಂದು ದೊರೆಸ್ವಾಮಿ ಹೇಳಿದರು.

ನನಗೆ ಈಗ 103 ವರ್ಷ. ಹೋರಾಟಗಳಲ್ಲಿ ಪಾಲ್ಗೊಳ್ಳದಂತೆ ನನಗೆ ಕೆಲವರು ಸಲಹೆ ನೀಡುತ್ತಾರೆ. ದೇಶ ಕಟ್ಟಿದ ನನಗೆ ಇಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಬೇಡಿ ಎಂದರೆ ಹೇಗೆ ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಬ್ರಿಟೀಷರನ್ನು ಈ ನೆಲದಿಂದ ಓಡಿಸಿದವನು ನಾನು. ನನಗೆ ವಯಸ್ಸಿನ ಹಂಗಿಲ್ಲ ಎಂದು ಅವರು ಹೇಳಿದರು.

ಪತ್ರಕರ್ತೆ ನಾಝಿಯಾ ಕೌಸರ್ ಮಾತನಾಡಿ, ನಾವು ಜೀವಿಸುವ ಮಣ್ಣಿಗೆ ಗೌರವಿಸಿದರೆ ಅರ್ಧ ಭಾಗ ಧರ್ಮವನ್ನು ಪಾಲಿಸಿದಂತೆ ಎಂದು ಇಸ್ಲಾಮ್ ಧರ್ಮ ಹೇಳುತ್ತದೆ. ನಮ್ಮ ದೇಶಕ್ಕಾಗಿ ನಾವು ಪ್ರಾಣ ಕೊಡಲು ಸಿದ್ಧ. ಏಕೆಂದರೆ, ನಾವು ಗೋಡ್ಸೆಯ ಸಂತತಿ ಅಲ್ಲ, ಹಝ್ರತ್ ಟಿಪ್ಪು ಸುಲ್ತಾನ್, ಮೌಲಾನ ಆಝಾದ್ ಅವರ ಸಂತತಿ ಎಂದರು.

ಬಡವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು, ಅವಿದ್ಯಾವಂತರು ಎಲ್ಲಿಂದ ತಮ್ಮ ದಾಖಲೆಗಳನ್ನು ತರಬೇಕು. ದೇಶವನ್ನು ರಕ್ಷಿಸಲು ಮುಸ್ಲಿಮ್ ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಕರಾಳ ಕಾಯ್ದೆಯನ್ನು ಹಿಂಪಡೆಯುವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಸಿಪಿಎಂ ಮುಖಂಡ ಪ್ರಕಾಶ್, ದಲಿತ ಮುಖಂಡ ಮೋಹನ್‌ ರಾಜ್, ವಕೀಲ ವಿನಯ್ ಶ್ರೀನಿವಾಸ್, ಕ್ಲಿಂಟಾಪ್, ಕ್ರೈಸ್ತ ಧರ್ಮ ಗುರು ಫ್ರಾನ್ಸಿಸ್ ಗುಂಟಿಪಿಲ್ಲಿ, ಡಾ.ಸೈಯ್ಯದ್ ಮುಝಮ್ಮಿಲ್ ಅಹ್ಮದ್, ಗಫಾರ್ ಬೇಗ್, ಚಾಂದ್ ಪಾಷ, ಆಸಿಫ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News