ವಚನ ಚಳುವಳಿ ನಾಶಗೊಳಿಸಿದ ಪುರೋಹಿತರು: ಮಾಜಿ ಸಚಿವೆ ಲಲಿತಾ ನಾಯ್ಕ

Update: 2020-02-23 14:57 GMT

ಬೆಂಗಳೂರು, ಫೆ.23: ಪುರೋಹಿತ ಶಾಹಿ ವರ್ಗದವರು ತುಂಬಾ ಬುದ್ದಿ ಜೀವಿಗಳಾಗಿದ್ದು, ಕೂತಲ್ಲೆ ತಮ್ಮ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ, ತನ್ನದೆ ನಿಲುವಿನಲ್ಲಿ ಸಾಗುತ್ತಿದ್ದ ಬೌದ್ದ ಧರ್ಮ, ವಚನ ಚಳುವಳಿಯನ್ನು ನಿರ್ಮೂಲನೆ ಮಾಡಿ ಜನರನ್ನು ಮೌಢ್ಯತೆಯ ಕಡೆಗೆ ಕರೆದೊಯ್ದಿದ್ದಾರೆ ಎಂದು ಚಿಂತಕಿ, ಮಾಜಿ ಸಚಿವ ಲಲಿತಾ ನಾಯ್ಕ ಅಭಿಪ್ರಾಯಪಟ್ಟರು.

ರವಿವಾರ ಇಲ್ಲಿನ ರಾಜಾಜಿನಗರದ ಕೆಎಲ್ಇ ಕಾಲೇಜಿನಲ್ಲಿ ಸಿದ್ಧಮಂಗಳಾ ಸೇವಾ ಕೇಂದ್ರ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು ವತಿಯಿಂದ ಆಯೋಜಿಸಿದ್ದ, ಜಗದಗಲ ಮಂಟಪ ಜ್ಞಾನ ದಾಸೋಹದ ಪ್ರಯುಕ್ತ ‘ವಚನಕಾರ್ತಿಯರು ಮತ್ತು ಆಧುನಿಕ ಕವಯತ್ರಿಯರ ಕಾವ್ಯ ಒಂದು ಅನುಸಂಧಾನ’ ವಿಚಾರ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇತ್ತಿಚೀನ ದಿನಗಳಲ್ಲಿ ಧರ್ಮ, ಜಾತಿ ಎಂಬ ಪರಿಕಲ್ಪನೆ ಬದಲಾಗಿದೆ. ಧರ್ಮ ಎಂದರೆ ಬರೀ ಮೌಢ್ಯತೆಗೆ ಒಳಗಾಗಿದೆ. ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಶೋಷಿತ ವರ್ಗದರೆ ಆಗಿದ್ದಾರೆ. ಇನ್ನು ಪುರೋಹಿತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ನುಡಿದರು.

ನಿಜವಾದ ಮಾನವ ಧರ್ಮ ಸಮಾಜದಲ್ಲಿ ಕಾಣಬೇಕಾದರೆ ಶರಣರ ತತ್ವದ ಸಾರವನ್ನು ಅರಿತುಕೊಳ್ಳಬೇಕು.ಯಾವ ವಚನದಲ್ಲಿಯೂ ಮೂಢನಂಬಿಕೆ ಇಲ್ಲ. ವಚನಕಾರರು ತತ್ವ ಸಿದ್ದಾಂತಗಳನ್ನು ಅವಳವಡಿಸಿಕೊಂಡು ಬರೆದಿದ್ದಾರೆ. ನಿಮ್ಮ ಮಕ್ಕಳಿಗೆ ವಾಸ್ತವ ಜಗತ್ತಿನ ಪರಿಚಯ ಮಾಡಿಕೊಡಿ. ದಾರಿ ತಪ್ಪಿಸುವುದು ಬೇಡ. ಇಂದಿನ ಲೇಖಕಿಯರು ಹೆಚ್ಚು ಓದಿ ಆ ಮೂಲಕ ಹೆಚ್ಚು ಮೌಲ್ಯಗಳನ್ನು ಪಡೆದು ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಹೊಸ ವಿಚಾರಗಳನ್ನು ಪಸರಿಸಬೇಕು. ಸಂಶೋಧನೆ ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಸಂಶೋಧಿಸಿ ಸತ್ಯಾಸತ್ಯತೆಯನ್ನು ಸಮಾಜಕ್ಕೆ ಕೊಡಬೇಕು ಎಂದರು.

ಸಮಾಜಕ್ಕೆ ಹೊಸ ತತ್ವಗಳನ್ನು ತಿಳಿಸಿದವರು ಬಸವ ಬಳಗದವರು. ಇದನ್ನು ಪ್ರಸ್ತುತ ಸಮಾಜಕ್ಕೆ ಅನುಸರಿಸುವುದು ಅಗತ್ಯವಾಗಿದೆ. 12ನೇ ಶತಮಾನ ಎನ್ನುವುದು ಮಹತ್ವದ ಘಟ್ಟ. ಆಗಿನ ಕಾಲದಲ್ಲೆ ಮಹಿಳೆಗೆ ಶಿಕ್ಷಣ ದೊರತಿದೆ ಎಂಬುದಕ್ಕೆ ಅವರ ರಚಿಸಿದ ವಚನಗಳೆ ಸಾಕ್ಷಿಯಾಗಿವೆ. ಅವರು ಸುಮ್ಮನೆ ವಚನಗಳನ್ನು ಬರೆದಿಲ್ಲ. ಎಲ್ಲವನ್ನು ಅರಿತು ವಚನಗಳನ್ನು ರಚಿಸಿದ್ದಾರೆ ಎಂದು ಲಲಿತಾ ನಾಯ್ಕಾ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕಿ ಶೀಲಾದೇವಿ ಎಸ್.ಮಳೀಮಠ, ಶಿವನಗೌಡ, ಡಾ.ಲೋಕೇಶ್ವರಪ್ಪ, ಟಿ.ಶಿವಪ್ರಸಾದ್, ಮಹೇಶ್ವರಿ, ಪ್ರತಿಮಾ, ಜಯಶ್ರೀ ಸೇರಿದಂತೆ ಪ್ರಮುಖರಿದ್ದರು.

ಪ್ರತ್ಯೇಕ ಧರ್ಮ

ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹೋರಾಟ ನಡೆಯುತ್ತಿದೆ. ಆದರೆ, ಈ ಹೋರಾಟವೂ ನಿಜಾಂಶದಿಂದ ಕೂಡಿದ್ದು, ಯಾರದ್ದೊ ಆಚರಣೆಯನ್ನು ಇವರ್ಯಾಕೆ ಆಚರಣೆ ಮಾಡಬೇಕು. ತತ್ವ ಧರ್ಮದ ತತ್ವ ಸಿದ್ದಾಂತಗಳನ್ನು ಆಚರಿಸಿಕೊಳ್ಳಲು ಹೋರಾಟ ಬೇಕಾಗಿದೆ.

-ಬಿ.ಟಿ.ಲಲಿತಾ ನಾಯ್ಕ, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News