ರಾಜ್ಯದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿಭಾಗೀಯ ಕೇಂದ್ರ ಸ್ಥಾಪನೆಗೆ ಚಿಂತನೆ: ಸಚಿವ ಡಾ.ಸುಧಾಕರ್

Update: 2020-02-23 14:59 GMT

ಬೆಂಗಳೂರು, ಫೆ. 23: ರಾಜ್ಯದಲ್ಲಿ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷತೆ ಹೊಂದಿರುವ ಕಿದ್ವಾಯಿ ಆಸ್ಪತ್ರೆ ವಿಭಾಗೀಯ ಕೇಂದ್ರಗಳನ್ನು ಬೆಳಗಾವಿ, ಮೈಸೂರು, ಕಲಬುರ್ಗಿ ಮtftu ಬೀದರ್‌ನಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. 

ರವಿವಾರ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಸಂಕಲ್ಪ ನವೋದಯ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಕ್ಯಾನ್ವಾಕ್-2020 ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಯಾನ್ಸರ್ ಮಾರಕ ರೋಗ. ಇದಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯವಿದೆ ಎಂದರು.

ಕ್ಯಾನ್ಸರ್‌ಗೆ ಚಿಕಿತ್ಸೆ ಇಲ್ಲವೇ ಇಲ್ಲ ಎನ್ನುವ ಕಾಯಿಲೆಯಲ್ಲ. ಆದರೆ, ಈ ಕಾಯಿಲೆಯನ್ನು ಆದಷ್ಟು ಬೇಗ ಪತ್ತೆ ಹಚ್ಚುವ ಕಾರ್ಯ ಆಗಬೇಕಾಗಿದೆ. ಅದಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಬೇಕಾಗಿದೆ ಎಂದು ಹೇಳಿದರು.

ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲರು ದೈಹಿಕವಾಗಿ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಚಟುವಟಿಕೆಯಲ್ಲಿ ಭಾಗಿಯಾದರೆ ಕ್ಯಾನ್ಸರ್‌ನಿಂದ ದೂರ ವಾಗಬಹುದು. ದುಶ್ಚಟಗಳಿಂದ ಬಹಳಷ್ಟು ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣ ನಗರದಲ್ಲಿ ಪ್ಯಾಸ್ಟಿಕ್ ನಿಷೇಧಗೊಳಿಸಿರುವುದು ಬೆಂಗಳೂರು ನಗರದಲ್ಲಿ. ನಗರದ ಸ್ವಚ್ಚತೆಯ ಜವಾಬ್ದಾರಿ ಕೇವಲ ಬಿಬಿಎಂಪಿಯದ್ದಲ್ಲ. ಸಾರ್ವಜನಿಕರು ಬಿಬಿಎಂಪಿಯ ಜತೆ ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವಾಕಥಾನ್‌ನಲ್ಲಿ ಚಿತ್ರನಟ ಶೈನ್ ಶೆಟ್ಟಿ, ನವೋದಯ ಹಳೆಯ ವಿದ್ಯಾರ್ಥಿಗಳು, ಬಿಬಿಎಂಪಿ ನೌಕರರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News