ಪಾಲಿಕೆ ಭದ್ರತಾ ಪಡೆ ರಚಿಸಲು ಕೋರಿ ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-02-23 17:37 GMT

ಬೆಂಗಳೂರು, ಫೆ.23: ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆಗೆ ಹಾಗೂ ತೆರಿಗೆ ವಂಚಕರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲು ಪಾಲಿಕೆ ಭದ್ರತಾ ಪಡೆ ರಚಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ನಿವೃತ್ತ ಸರಕಾರಿ ಅಧಿಕಾರಿ ಜಿ.ಆರ್.ಗಾರವಾಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಮತ್ತು ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 (ಕೆಎಂಸಿ) ಸೆಕ್ಷನ್ 491 ಮತ್ತು 492 ಅನುಸಾರ ಎಲ್ಲ ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆಗೆ ಹಾಗೂ ತೆರಿಗೆ ವಂಚಕರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಪಾಲಿಕೆ ಭದ್ರತಾ ಪಡೆ ರಚನೆ ಮಾಡಬೇಕು. ಅದರ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡಬೇಕು. ಈ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೆಎಂಸಿ ಕಾಯ್ದೆ ಜಾರಿಯಾಗಿ 44 ವರ್ಷ ಕಳೆದಿವೆ. ಆದರೆ, ಎಲ್ಲ ನಗರ ಪಾಲಿಕೆಗಳಲ್ಲಿ ಸೆಕ್ಷನ್ 491 ಮತ್ತು 491 ಹೇಳಿರುವಂತೆ ಪಾಲಿಕೆ ಭದ್ರತಾ ಪಡೆ ರಚನೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಪರಿಣಾಮ ನಗರ ಪಾಲಿಕೆಗಳ ಆಸ್ತಿ ಕಬಳಿಕೆದಾರರು ಮತ್ತು ತೆರಿಗೆ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೆ, ಪಾಲಿಕೆ ಆಸ್ತಿ ಕಬಳಿಕೆ ಹಾಗೂ ತೆರಿಗೆ ವಂಚನೆ ಬಗೆಗಿನ ಅಪರಾಧ ಕತ್ಯಗಳ ಸಂಬಂಧ ನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕಿದೆ. ಈಗಾಗಲೇ ಆ ಪೊಲೀಸರ ಮೇಲೆ ಹೆಚ್ಚಿನ ಹೊರೆಯಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಪರಿಣಾಮ ಪಾಲಿಕೆ ಅಧಿಕಾರಿಗಳು ದಾಖಲಿಸುವ ದೂರುಗಳ ಬಗ್ಗೆ ಸರಿಯಾದ ತನಿಖೆ ನಡೆಯುತ್ತಿಲ್ಲ. ಹೀಗಾಗಿ, ಎಲ್ಲ ನಗರ ಪಾಲಿಕೆಗಳಲ್ಲಿ ಪಾಲಿಕೆ ಭದ್ರತಾ ಪಡೆ ರಚಿಸಲು ಹಾಗೂ ಅದರ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News