ಮರಾಠ ಜನಾಂಗವನ್ನು 2(ಎ) ಪ್ರವರ್ಗಕ್ಕೆ ಸೇರಿಸಿ: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಒತ್ತಾಯ

Update: 2020-02-23 17:45 GMT

ಬೆಂಗಳೂರು, ಫೆ.23: ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮರಾಠ ಸಮುದಾಯವನ್ನು 3(ಬಿ) ಯಿಂದ 2(ಎ) ಪ್ರವರ್ಗಕ್ಕೆ ಸೇರ್ಪಡಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಒತ್ತಾಯ ಮಾಡಿದ್ದಾರೆ.

ರವಿವಾರ ಇಲ್ಲಿನ ವಸಂತ ನಗರದ ಕೆಕೆಎಂಪಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಏರ್ಪಡಿಸಿದ್ದ, ಛತ್ರಪತಿ ಶಿವಾಜಿ ಮಹಾರಾಜರ 393ನೆ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮರಾಠ ರನ್ನು ಪ್ರವರ್ಗ 2ಕ್ಕೆ ಸೇರ್ಪಡೆ ಮಾಡುವ ಬೇಡಿಕೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈ ಬೇಡಿಕೆ ಈಡೇರಿಸಲಿದ್ದಾರೆ ಎನ್ನುವ ವಿಶ್ವಾಸ ಸಮುದಾಯದಲ್ಲಿ ಇದೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಮರಾಠ ಸಮುದಾಯ ಒಗ್ಗೂಡಬೇಕಾಗಿದೆ. ಇಲ್ಲದಿದ್ದರೆ, ರಾಜಕೀಯ ಸ್ಥಾನಮಾನ ದೊರೆಯುವುದಿಲ್ಲ ಎಂದ ಅವರು, ಎಲ್ಲ ಜನಾಂಗಗಳ ಜೊತೆಯಲ್ಲೂ ಮರಾಠ ಸಮುದಾಯ ಗುರುತಿಸಿಕೊಂಡು, ಜಾತ್ಯತೀತರಾಗಿ ಬದುಕು ಕಟ್ಟಿಕೊಂಡಿದ್ದೇವೆ ಎಂದು ಸಿಂಧ್ಯಾ ಹೇಳಿದರು.

ಕೆಕೆಎಂಪಿ ಅಧ್ಯಕ್ಷ ಎಸ್.ಸುರೇಶ ರಾವ್ ಸಾಠೆ ಮಾತನಾಡಿ, ಮರಾಠ ಸಮುದಾಯ ಶೈಕ್ಷಣಿಕ ಮತ್ತು ಸಾಮಾಜಿಕ ಶ್ರೇಯೋಭಿವೃದ್ಧಿಗೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನಿಧಿ ಬಳಕೆ ಮಾಡಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಸೇರಿ ಅನೇಕ ಕಡೆ ಜಮೀನು ಖರೀದಿ ಮಾಡಲಾಗಿದ್ದು, ಈ ಪ್ರದೇಶವನ್ನು ಸಮುದಾಯ ಅಭಿವೃದ್ಧಿ ಹೊಂದಲು ಬೇಕಾಗಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಗೌರವ ಅಧ್ಯಕ್ಷ ವಿ.ಎ.ರಾಣೋಜಿರಾವ್ ಸಾಠೆ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಹಿಂದಳಿದ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ, ಜನಾಂಗದ ಏಳಿಗೆಗೆ ರಾಜ್ಯ ಸರಕಾರ ಮುಂದಾಗಬೇಕು. ಅದೇ ರೀತಿ, 100 ಕೋಟಿ ರೂ. ಅನುದಾನ, ಪ್ರತ್ಯೇಕ ನಿಗಮ ಮಂಡಳಿ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ವಿ.ಮಾನೆ, ಪಾಲಿಕೆ ಸದಸ್ಯರಾದ ಎಸ್.ಸಂಪತ್ ಕುಮಾರ್, ಆರ್.ಗಣೇಶ್ ರಾವ್ ಮಾನೆ, ಕೆಕೆಎಂಪಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಹನುಮಂತ ರಾವ್ ಪನ್ನಾಳೆ, ಗೌರವ ಖಜಾಂಚಿ ಟಿ.ಆರ್.ವೆಂಕಟ್ ರಾವ್ ಚವ್ಹಾಣ್, ಕೃಷ್ಣಾ ಕುಮಾರಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News