ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಿ, ರಣಹದ್ದು ಸಂತತಿ ಉಳಿಸಿ

Update: 2020-02-23 18:15 GMT

ಮಾನ್ಯರೇ,

ಗದಗ ಜಿಲ್ಲೆಯ ನೈಸರ್ಗಿಕ ತಾಣಗಳಾದ ಗಜೇಂದ್ರಗಡ, ಕಾಲಕಾಲೇಶ್ವರ, ನಾಗೇಂದ್ರಗಡ, ಶಾಂತಗಿರಿ ಬೆಟ್ಟಗಳ ಸಾಲುಗಳಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ನೀಳಕೊಕ್ಕಿನ ರಣಹದ್ದು (Long billed vulture)ಗಳು ಕಾಣಿಸಿಕೊಂಡಿವೆ. ಈ ಬಗ್ಗೆ ನಾಡಿನ ಪ್ರಮುಖ ಪತ್ರಿಕೆಗಳು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿವೆ.
ಈ ಬೆಟ್ಟಗಳ ಸಾಲಿನಲ್ಲಿ ದಶಕಗಳ ನಂತರ ರಣಹದ್ದುಗಳು ಗೋಚರಿಸಿದ್ದು ಪಕ್ಷಿಪ್ರಿಯರ ಹಾಗೂ ಅಧ್ಯಯನಾಸಕ್ತರ ಕೌತುಕವನ್ನು ಹೆಚ್ಚಿಸಿವೆ. ಗಜೇಂದ್ರಗಡ ಬೆಟ್ಟದಲ್ಲಿ ರಣಹದ್ದುಗಳ ಇರುವಿಕೆ ಪತ್ತೆಹಚ್ಚಿದ ಜೀವವೈವಿಧ್ಯ ಸಂಶೋಧಕರು, ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಶಿರಸಿ ಅರಣ್ಯ ಮಹಾವಿದ್ಯಾನಿಲಯದ ವಿದ್ಯಾರ್ಥಿಗಳು ಅಭಿನಂದನಾರ್ಹರು.

ನಾವೆಲ್ಲ ಬಾಲಕರಾಗಿದ್ದ ಈ ಬೆಟ್ಟಗಳ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯ ರಣಹದ್ದುಗಳು ಹಾರಾಡುವುದನ್ನು ಕಾಣುತ್ತಿದ್ದೆವು. ನಮ್ಮ ಹಿರಿಯರು ‘ಅಲ್ಲಿ ನೋಡು ಹದ್ದು’ ಎಂದು ಹೇಳುತ್ತಿದ್ದರು. ಇಡೀ ಬೆಟ್ಟದ ಪರಿಸರವೇ ಆಗ ಅಪರೂಪದ ಪಕ್ಷಿಗಳ ಧಾಮವಾಗಿತ್ತು. ಈಗ ಅವೆಲ್ಲ ಬರೀ ನೆನಪಾಗಿ ಉಳಿದಿದೆ.

ಸೃಷ್ಟಿಯ ಜೀವನಚಕ್ರದಲ್ಲಿ ರಣಹದ್ದುಗಳ ಪಾತ್ರದ ಬಗ್ಗೆ ನಮಗಾರಿಗೂ ಅರಿವು ಇರಲಿಲ್ಲ. ರಣಹದ್ದುಗಳು ಸತ್ತ, ಕೊಳೆತ ಪ್ರಾಣಿಗಳ ದೇಹದ ಮಾಂಸ ತಿಂದು ಅವುಗಳಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರಿನ ಜನರನ್ನು ರಕ್ಷಿಸುತ್ತವೆ.

ಜಾನುವಾರಗಳಿಗೆ ಜ್ವರ, ಉರಿಯೂತ, ಮೂಳೆನೋವು ಮತ್ತಿತರ ರೋಗನಿವಾರಣೆಗೆ ‘ಡೈಕ್ಲೊಫಿನಾಕ್’ ಎಂಬ ವಿಷಪೂರಿತ ರಾಸಾಯನಿಕ ಔಷಧ ನೀಡಲಾಗುತ್ತಿತ್ತು. ಈ ಔಷಧದಿಂದ ಉಪಚರಿಸಲ್ಪಟ್ಟ ಜಾನುವಾರುಗಳ ಕಳೇಬರ ತಿಂದ ರಣಹದ್ದುಗಳು ಮೂತ್ರಪಿಂಡ ಸೇರಿದಂತೆ ಬಹು ಅಂಗಾಂಗಗಳ ವೈಫಲ್ಯದಿಂದ ಅಸನೀಗಿದವು ಎಂಬ ಸಂಗತಿ ಈ ತಂಡ ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ. ಈ ವಿಷದ ಪರಿಣಾಮ ಈಗಲೂ ಇದ್ದು ಅವುಗಳ ಸಂತತಿ ಕ್ಷೀಣಿಸುತ್ತ ಸಾಗಿದೆ. 2006ರಲ್ಲಿ ‘ಡೈಕ್ಲೊಫಿನಾಕ್’ ನಿಷೇಧದ ಬಳಿಕ ಅದರಿಂದ ಉಂಟಾದ ಜೀವಿಗಳ ಹಾನಿಯನ್ನು ಪುನರುಜ್ಜೀವನ ಗೊಳಿಸುವ ಚರ್ಚೆಗಳು ಅಷ್ಟಾಗಿ ನಡೆಯಲಿಲ್ಲ. ಉಳಿದ ಪಕ್ಷಿಗಳನ್ನು ಹೇಗೆ ಸಂರಕ್ಷಿಸಬೇಕು ಎಂಬ ಸಂಗತಿಯೂ ಮುನ್ನೆಲೆಗೆ ಬರಲೇ ಇಲ್ಲ.

ಈಗ ಆ ಕಾಲ ಒದಗಿ ಬಂದಿದೆ. ಸರಕಾರ ಮನಸ್ಸು ಮಾಡಿದರೆ ಗಜೇಂದ್ರಗಡ ಸುತ್ತಲಿನ ಬೆಟ್ಟಗಳ ಸರಣಿಯಲ್ಲಿ ರಣಹದ್ದುಗಳ ಸಂತತಿ ಉಳಿಸಬಹುದಾಗಿದೆ. ಇಂತಹ ಆಸೆಗಣ್ಣಿನಿಂದ ಪಕ್ಷಿಪ್ರೇಮಿಗಳು ನೋಡುತ್ತಿದ್ದಾರೆ.

ರಾಮನಗರದಂತೆ ಇಲ್ಲಿಯೂ ರಣಹದ್ದುಗಳ ಸಂರಕ್ಷಣೆಗೆ ಆದ್ಯತೆ ನೀಡಬಹುದು. ಅವುಗಳ ಅಸ್ತಿತ್ವಕ್ಕೆ ಪೂರಕವಾದ ಪರಿಸರ ನಿರ್ಮಿಸಲು ಕುವೆಂಪು ವಿ.ವಿ. ಸಂಶೋಧನಾ ವಿದ್ಯಾರ್ಥಿಗಳ ವರದಿಯೇ ಸಹಕಾರಿ ಆಗಬಲ್ಲದು. ಸಂತಾನೋತ್ಪತ್ತಿ ಕೇಂದ್ರ ಆರಂಭವಾದರೆ ಅವುಗಳ ರಕ್ಷಣೆಗೆ ‘ಹದ್ದಿನ ಕಣ್ಣು’ ಇಡಬಹುದಾಗಿದೆ. ಜತೆಗೆ ಪರಿಸರ ಸಮತೋಲನಕ್ಕೆ ನೆರವಾಗುವ ಇಲ್ಲಿನ ಇತರ ಪ್ರಾಣಿ? ಪಕ್ಷಿಗಳ ‘ಕಳ್ಳಬೇಟೆ’ಯೂ ತಡೆಯಬಹುದು.

ಈ ಭಾಗದ ವಿಶಾಲವಾದ ಗುಡ್ಡಗಳಲ್ಲಿ ರಣಹದ್ದುಗಳ ಗೂಡುಗಳನ್ನು ಪತ್ತೆಹಚ್ಚಲಾಗಿದೆ. ಗೂಡುಕಟ್ಟಿದ ಸ್ಥಳ ಸುರಕ್ಷಿತಗೊಳ್ಳಬೇಕಾಗಿದೆ. ಗೂಡು ಕಟ್ಟುವ ಸ್ಥಳ ಸುರಕ್ಷಿತ ವೆನಿಸಿದರೆ ರಣಹದ್ದುಗಳು ಪ್ರತಿವರ್ಷ ಸಂತಾನೋತ್ಪತ್ತಿಗಾಗಿ ಮರಳಿ ಬರುತ್ತವೆ. ಆಫ್ರಿಕಾ, ಏಶ್ಯ, ಯೂರೋಪ್ ಖಂಡಗಳಲ್ಲಿ ಮಾತ್ರ ಇವುಗಳು ಈಗ ಹೆಚ್ಚಾಗಿ ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಅವುಗಳನ್ನು ಉಳಿಸುವ ಹಾಗೂ ಬೆಳೆಸುವ ಪೂರಕ ಪರಿಸರ ನಿರ್ಮಿಸುವ ತುರ್ತು ಒದಗಿ ಬಂದಿದೆ. ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂತಾನೋತ್ಪತ್ತಿ ಕೇಂದ್ರಗಳನ್ನು ಅಲ್ಲಿನ ಸರಕಾರಗಳೇ ಸ್ಥಾಪನೆ ಮಾಡಿವೆ. ಅವುಗಳಿಂದ ರಣಹದ್ದುಗಳ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಕಂಡಿದೆ.

ಕರ್ನಾಟಕದ ರಣಹದ್ದುಗಳ ಪ್ರಮುಖ ಆವಾಸ ಸ್ಥಾನವಾದ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದ ಪರಿಸರದ 856 ಎಕರೆ ಪ್ರದೇಶವನ್ನು ‘ರಣಹದ್ದು ಸಂರಕ್ಷಣಾ ಧಾಮವಾಗಿ’ 2012ರಲ್ಲಿ ಘೋಷಣೆ ಮಾಡಲಾಗಿದೆ. ಆದರೂ ಅವುಗಳ ಸಂತತಿ ಅಷ್ಟೇನೂ ವೃದ್ಧಿಸಿದಂತಿಲ್ಲ. ಗಜೇಂದ್ರಗಡದಲ್ಲಿ ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮೂಲಕ ಅವುಗಳ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕಿದೆ.

ಅರಣ್ಯ ಇಲಾಖೆಯ ನಿಗಾ ಇದ್ದರೆ ಮಾತ್ರ ವನ್ಯಜೀವಿಗಳ ರಕ್ಷಣೆ ಸಾಧ್ಯ. ಸೂಕ್ತ ನಿಗಾ ವಹಿಸುವ ಜತೆಗೆ ಸಂತಾನೋತ್ಪತ್ತಿ ಕೇಂದ್ರವೂ ಆರಂಭವಾದರೆ ಈ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.
 

Writer - ರವೀಂದ್ರ ಮ. ಹೊನವಾಡ ಗದಗ

contributor

Editor - ರವೀಂದ್ರ ಮ. ಹೊನವಾಡ ಗದಗ

contributor

Similar News