ಟ್ರಂಪ್ ಭಾರತಕ್ಕೆ ಭೇಟಿ: ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕದಂತೆ ಆಗ್ರಹಿಸಿ ಪ್ರತಿಭಟನೆ

Update: 2020-02-24 17:04 GMT

ಬೆಂಗಳೂರು, ಫೆ.24: ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದು, ಈ ವೇಳೆ ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮ ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಮೌರ್ಯ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ರೈತ ಸಂಘದ ಕಾರ್ಯಕರ್ತರು, ಭಾರತದ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಯಾವುದೇ ರೀತಿಯ ಒಪ್ಪಂದಗಳಿಗೆ ಮುಂದಾಗಬಾರದು. ನಮ್ಮ ದೇಶವನ್ನು ವಿದೇಶಗಳಲ್ಲಿ ಮಾರಾಟಕ್ಕಿಡಲು ಮುಂದಾಗಬಾರದು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸಕ್ಕೆ ಬಂದಿರುವುದು ಸಾಗತಾರ್ಹ. ಆದರೆ, ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಸಂಬಂಧಿಸಿದಂತೆ ಒಪ್ಪಂದ ನಡೆಯುವ ಸಾಧ್ಯತೆಯಿದೆ. ಇದು ಆದರೆ ಅಮೆರಿಕದಿಂದ ಭಾರತಕ್ಕೆ ವಾರ್ಷಿಕ 41 ಸಾವಿರ ಕೋಟಿ ರೂ. ಮೌಲ್ಯದ ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು ಸೇರಿದಂತೆ ಕೃಷಿ ಉತ್ಪನ್ನಗಳು ಆಮದಾಗುತ್ತವೆ. ಇದರಿಂದ ನಮ್ಮ ರೈತರಿಗೆ ತೊಂದರೆಯಾಗಲಿದೆ ಎಂದರು.

ಅಮೆರಿಕಾ ಹಾಗೂ ಭಾರತದೊಂದಿಗೆ ಒಪ್ಪಂದವಾದರೆ ಹೈನುಗಾರಿಕೆಯಲ್ಲಿ ತೊಡಗಿರುವ ದೇಶದ ಕೋಟ್ಯಂತರ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅದೇ ರೀತಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸೇಬು, ಚೆರಿ, ಬಾದಾಮಿ, ಸೋಯಾಬಿನ್, ಗೋಧಿ, ಜೋಳ ಮೊದಲಾದ ಹಣ್ಣು ಮತ್ತು ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಶೇ.100ರಿಂದ ಶೇ.10ಕ್ಕೆ ಇಳಿಸಿದರೆ ದೇಶದ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದರು.

ಕೇಂದ್ರ ಸರಕಾರ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಸಂಬಂಧಿಸಿದಂತೆ ಸಹಿ ಹಾಕುವುದರಿಂದ ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಕೋಟ್ಯಂತರ ಮಂದಿಗೆ ಮರಣ ಶಾಸನವಾಗಲಿದೆ. ಹೀಗಾಗಿ ಒಪ್ಪಂದದ ಪ್ರಸ್ತಾವನೆ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಬೀಜ ಮಸೂದೆ ಹಾಗೂ ಮಾದರಿ ಭೂಗುತ್ತಿಗೆ ಪದ್ಧತಿ ಮಸೂದೆ ಜಾರಿಗೆ ಸಿದ್ಧತೆ ನಡೆಸಿದೆ. ರೈತರಿಗೆ ಬೀಜದ ಮೇಲೆ ಸಾರ್ವಭೌಮತ್ವ ಇರಬೇಕು. ಆದರೆ, ಕೇಂದ್ರ ಸರಕಾರ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಬೀಜ ಮಸೂದೆ ಜಾರಿಗೆ ಮುಂದಾಗಿದೆ. ಮಾದರಿ ಭೂಗುತ್ತಿಗೆ ಪದ್ಧತಿ ಮಸೂದೆ ಮೂಲಕ ದೇಶದಲ್ಲಿ 6500 ಕೋಟಿ ಎಕರೆ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ನಿರ್ಧರಿಸಿರುವುದು ಖಂಡನೀಯ. ಸರಕಾರ ಕೂಡಲೇ ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News