ಲೈಸೋಸೋಮ್ ಚಿಕಿತ್ಸೆಗೆ 5.95 ಕೋಟಿ ರೂ. ಬಿಡುಗಡೆಗೆ ಹೈಕೋರ್ಟ್ ಆದೇಶ

Update: 2020-02-24 18:05 GMT

ಬೆಂಗಳೂರು, ಫೆ.24: ರಾಜ್ಯದಲ್ಲಿ ಲೈಸೋಸೋಮ್ ಸಮಸ್ಯೆ(ಎಲ್‌ಎಸ್‌ಡಿ)ಯಿಂದ ಬಳಲುತ್ತಿರುವ 25 ಮಕ್ಕಳ ಚಿಕಿತ್ಸೆಗೆ ನಾಲ್ಕು ಕಂತುಗಳಲ್ಲಿ 5.95 ಕೋಟಿ ರೂ.ಬಿಡುಗಡೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಮೊದಲನೆಯ ಕಂತನ್ನು ಮಾ.23ರಂದು ಬಿಡುಗಡೆ ಮಾಡಲು ಆದೇಶಿಸಿದೆ. 

ಕರ್ನಾಟಕದಲ್ಲಿ ಲೈಸೋಸೋಮ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಹೊಸದಿಲ್ಲಿ ಮೂಲದ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ಸ್ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರ ಸಂವಿಧಾನದ ಪರಿಚ್ಛೇದ 21ರ ಅನ್ವಯ ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಆದರೆ, ರಾಜ್ಯ ಸರಕಾರ ಈ ಪರಿಚ್ಛೇದವನ್ನು ಜಾರಿಗೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯದಲ್ಲಿ ಲೈಸೋಸೋಮ್ ಸಮಸ್ಯೆಯಿಂದ 45 ಮಕ್ಕಳು ಬಳಲುತ್ತಿದ್ದು, ಸದ್ಯ 25 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಕ್ಕಳ ಚಿಕಿತ್ಸೆಗೆ ನಾಲ್ಕು ಕಂತುಗಳಲ್ಲಿ 5.95 ಕೋಟಿ ರೂ. ಜೂನ್ ತಿಂಗಳ ಹೊತ್ತಿಗೆ ಬಿಡುಗಡೆ ಮಾಡಬೇಕು. ಮೊದಲ ಕಂತನ್ನು ಮಾ.23ರಂದು ಬಿಡುಗಡೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ, ಮಕ್ಕಳು ಚಿಕಿತ್ಸೆ ಸಿಗದೆ ಸಮಸ್ಯೆ ಉದ್ಭವಾದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಅವರ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಲೈಸೋಸೋಮ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40ರಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರ ಚಿಕಿತ್ಸೆಗೆ ಬೇಕಾಗುವಷ್ಟು ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯ ಸರಕಾರ ಎಲ್‌ಎಸ್‌ಡಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಬೇಕೆಂದು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News