ಹಣ್ಣು, ತರಕಾರಿ ಬೀದಿಗೆ ಎಸೆದು ವ್ಯಾಪಾರಸ್ಥರ ಪ್ರತಿಭಟನೆ

Update: 2020-02-24 18:08 GMT

ಬೆಂಗಳೂರು, ಫೆ.24: ಆಧುನೀಕರಣಗೊಂಡಿರುವ ಮಾರುಕಟ್ಟೆ ತೆರೆಯಲು ಮೀನಾಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ಹಣ್ಣು, ತರಕಾರಿಯನ್ನು ರಸ್ತೆಗೆ ಸುರಿದು ಕಾಕ್ಸ್‌ಟೌನ್ ಮಾರುಕಟ್ಟೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಸುಮಾರು 17 ವರ್ಷಗಳ ಹಿಂದೆ ನನೆಗುದಿಗೆ ಬಿದ್ದಿದ್ದ ಕಾಕ್ಸ್‌ಟೌನ್ ಮಾರುಕಟ್ಟೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದ್ದರೂ ಅದನ್ನು ತೆರೆಯಲು ಬಿಬಿಎಂಪಿ ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆ ತೆರೆಯುವಂತೆ ಪದೇ ಪದೇ ಮನವಿ ಮಾಡಿಕೊಂಡರೂ ಸ್ಪಂದಿಸದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಏಕಾಏಕಿ ರಸ್ತೆಗೆ ಇಳಿದು ಹಣ್ಣು, ತರಕಾರಿಯನ್ನು ಬೀದಿಗೆ ಎಸೆಯುವ ಮೂಲಕ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆ ತೆರೆಯದೆ ಇರುವುದರಿಂದ ವ್ಯಾಪಾರಕ್ಕೆ ಅನಾನುಕೂಲವಾಗಿದ್ದು, ಕೂಡಲೇ ಕಾಕ್ಸ್‌ಟೌನ್ ಮಾರುಕಟ್ಟೆಯನ್ನು ತೆರೆದು ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಅನುವು ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News