ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಮೊಟೆರಾ ಸ್ಟೇಡಿಯಂ ನ ಹೆಜ್ಜೆ ಗುರುತು

Update: 2020-02-24 18:44 GMT

ಹೊಸದಿಲ್ಲಿ, ಫೆ.24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದ್ದೂರಿ ಸ್ವಾಗತಕ್ಕೆ ಆತಿಥ್ಯವಹಿಸಿರುವ ಮೊಟೆರಾ ಸ್ಟೇಡಿಯಂ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ವಿಶೇಷ ಮೈದಾನವಾಗಿ ಗುರುತಿಸಿಕೊಂಡಿದೆ. ಈ ಸ್ಟೇಡಿಯಂನಲ್ಲಿ ಹಲವು ಹೆಜ್ಜೆ ಗುರುತುಗಳಿವೆ. 1983ರಲ್ಲಿ ಮೈದಾನದ ಇತಿಹಾಸದಲ್ಲಿ ಮೊದಲ ಪ್ರಮುಖ ಘಟನೆ ನಡೆದಿತ್ತು. ಭಾರತದ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಆ ಕಾಲದಲ್ಲಿ ಗರಿಷ್ಠ ಟೆಸ್ಟ್ ರನ್ ಗಳಿಸಿ ಇಂಗ್ಲೆಂಡ್‌ನ ಜೆಫ್ ಬಾಯ್ಕೆಟ್ ದಾಖಲೆಯನ್ನು ಮುರಿದಿದ್ದರು.

1983ರ ವಿಶ್ವಕಪ್ ವಿಜೇತ ಹೀರೊ ಕಪಿಲ್‌ದೇವ್ ಕೂಡ ತಮ್ಮ ವೃತ್ತಿಬದುಕಿನಲ್ಲಿ ಮೊಟೆರಾದಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಇದೇ ಮೈದಾನದಲ್ಲಿ ನ್ಯೂಝಿಲ್ಯಾಂಡ್ ದಂತಕತೆ ರಿಚರ್ಡ್ ಹ್ಯಾಡ್ಲೀ ದಾಖಲೆ ಮುರಿದು ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದರು. 1994ರಲ್ಲಿ ಕಪಿಲ್ ಅವರು ಟೆಸ್ಟ್ ವೃತ್ತಿಜೀವನದಲ್ಲಿ 431 ವಿಕೆಟ್ ಪಡೆದು ಹ್ಯಾಡ್ಲೀ ಸಾಧನೆ ಮುರಿದಿದ್ದರು. ಕಪಿಲ್ ದಾಖಲೆಯನ್ನು 1999ರಲ್ಲಿ ವೆಸ್ಟ್‌ಇಂಡೀಸ್‌ನ ಕೋರ್ಟ್ನಿ ವಾಲ್ಶ್ ಪುಡಿಗಟ್ಟಿದ್ದರು. 2011ರ ವಿಶ್ವಕಪ್ ಅಭಿಯಾನ ಎಲ್ಲರಿಗೂ ಸ್ಮರಣೀಯವಾಗಿದೆ. ಮೊಟೆರಾ ಸ್ಟೇಡಿಯಂನಲ್ಲಿ ನಡೆದಿದ್ದ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಿದ್ದ ಭಾರತ ತಂಡ ಯುವರಾಜ್ ಸಿಂಗ್ ಸಾಹಸದಿಂದ ಜಯಭೇರಿ ಬಾರಿಸಿತ್ತು. ಆ ನಂತರ ತವರು ನೆಲದಲ್ಲಿ ವಿಶ್ವಕಪ್ ಜಯಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿತ್ತು. 1982ರಲ್ಲಿ ನಿರ್ಮಿಸಲ್ಪಟ್ಟ 48,000 ಪ್ರೇಕ್ಷಕರ ಸಾಮರ್ಥ್ಯದ ಮೊಟೆರಾ ಸ್ಟೇಡಿಯಂನ್ನು ಧ್ವಂಸಗೊಳಿಸಿ ಸಂಪೂರ್ಣವಾಗಿ ಹೊಸ ಸುಸಜ್ಜಿತ ಸ್ಟೇಡಿಯಂ ನಿರ್ಮಿಸಲಾಗಿದೆ. 64 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮೊಟೆರಾ ಸ್ಟೇಡಿಯಂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿತ್ತು.

ಈ ಸ್ಟೇಡಿಯಂ ಅಂದಾಜು 700 ಕೋ.ರೂ. ವೆಚ್ಚದಲ್ಲಿ ಎರಡು ವರ್ಷಗಳಲ್ಲಿ ಪುನರ್‌ನಿರ್ಮಾಣವಾಗಿದೆ. ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸ್ಟೇಡಿಯಂನ್ನು ಸೋಮವಾರ ಲೋಕಾರ್ಪಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News